ಹೌದು, ನೀವು ಸರಿಯಾಗಿ ಓದಿದ್ದೀರಿ. ಈ ಕೆಲಸವನ್ನು ಮಾಡುತ್ತಿರುವುದು ಬೇರೆ ಯಾರೂ ಅಲ್ಲ. ಸ್ವತಃ ರಾಜ್ಯ ಶಿಕ್ಷಣ ಇಲಾಖೆ. ಹೇಗೆ? ನೀವು ಈ ವರ್ಷ ಹೊಸದಾಗಿ ಪರಿಷ್ಕೃತಗೊಂಡ 1ನೇ ತರಗತಿಯ ಕನ್ನಡ ಪುಸ್ತಕಗಳನ್ನು ತೆಗೆದುನೋಡಿ. ಇಡೀ ಪುಸ್ತಕದ ಸೃಷ್ಟಿಯೇ ಕನ್ನಡವನ್ನು ಕೊಲೆ ಮಾಡಲೆಂದೇ ಆಗಿದೆ ಎನ್ನುವಂತೆ ಭಾಸವಾಗುತ್ತದೆ. ಕನ್ನಡದ ಕಾಗುಣಿತ ಕಲಿಸುವ ಮೊದಲೇ ವಂದನೆ ಪದ್ಯ ಶುರುವಾಗುತ್ತದೆ. ಮಗುವಿನ ಕಲ್ಪನೆ ಅಪ್ಪ, ಅಮ್ಮನಿಂದ ಮುಂದೆ ಹೋಗುವ ಮೊದಲೇ ರೈತ, ಯೋಧ, ವೈದ್ಯೆ ಎಲ್ಲಾ ಬರುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ನೀವು ಕೇಳಬಹುದು!
ಅಂತೆಯೇ
ಕತೆಗಳು, ಹಾಡುಗಳು, ಶಬ್ಧಗಳು ಎಲ್ಲವೂ ಆಗ ತಾನೆ ಶಾಲೆಗೆ ಕಾಲಿಟ್ಟ ಮಗುವಿನ ಎದುರು ಒಮ್ಮೆಲೆ ಪ್ರತ್ಯಕ್ಷವಾಗುತ್ತವೆ.
ಅಷ್ಟು ದೊಡ್ಡ ಹಾಡುಗಳು, ಕತೆಗಳನ್ನು ಹೇಳಲು ಕಲಿಯುವುದಷ್ಟೇ ಅಲ್ಲ, ಅದರಲ್ಲಿ ಬರುವ ಶಬ್ಧಗಳು, ಅರ್ಥಗಳು,
ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂದು ಹೇಳುವುದು ಮತ್ತು ಬರೆಯುವುದೂ ಸಹ ಸೇರಿವೆ! ಎಂದರೆ
ಇದು ಯಾವ ವಯಸ್ಸಿನ ಮಕ್ಕಳ ಪುಸ್ತಕ ಎಂಬ ಗೊಂದಲಕ್ಕೆ ಬೀಳಿಸುತ್ತದೆ. ಇನ್ನು ಕಾಗುಣಿತ ಕಲಿಸುವಿಕೆಯೂ
ದೊಡ್ಡ ಗೊಂದಲ. ಮಗುವಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುವ ಯಾವುದೇ ತಂತ್ರಗಳು ಇಲ್ಲಿಲ್ಲ.
ನೆನಪಿಟ್ಟುಕೊಳ್ಳಲು
ಸಹಾಯವಾಗುವ ಸೀಕ್ವೆನ್ಸಿಂಗ್ , ಲಿಂಕಿಂಗ್ ವಿಧಾನಗಳು ಈ ಮೊದಲು ಇದ್ದವು. ಉದಾಹರಣೆಗೆ ಅ, ಆ, ಇ, ಈ
ಈ ರೀತಿ. ಈಗ ಅ ಒಮ್ಮೆ ಬಂದರೆ ಆ ಇನ್ನೆಲ್ಲೊ ಬರುತ್ತದೆ. ಯಾವತ್ತೋ ಕಲಿತಿರುವ ಅ, ಆ ಗಳನ್ನು ಈ ಒಂದನೆ
ತರಗತಿಯ ಮಗು ಗುರುತಿಸಿ ಹೇಳಬೇಕು ಎನ್ನುವ ಕಲ್ಪನೆ ಈ ಪಠ್ಯಕ್ರಮ ಸಿದ್ಧಪಡಿಸಿರುವವರ ಯೋಚನೆಯಂತಿದೆ.
ಮಗು ಅದಾಗಲೇ ಕನ್ನಡ ಅಕ್ಷರಗಳನ್ನು ಕಲಿತು ಬಂದಿರುತ್ತದೆ ಎಂಬ ಗ್ರಹಿಕೆಯಲ್ಲಿ ಈ ಪಠ್ಯ ಸಿದ್ಧಪಡಿಸಿರುವ
ಹಾಗೆ ತೋರುತ್ತದೆ. ಆದರೆ ಮಗು ಕನ್ನಡದ ಅ, ಆ , ಇ, ಈ ಸಹ ಕಲಿತಿರಲಿಕ್ಕಿಲ್ಲ ಎನ್ನುವುದಕ್ಕೆ ಸಾಕಷ್ಟು
ಸಾಕ್ಷಗಳು ದೊರೆಯುತ್ತವೆ. ಅವರ ಗಮನಕ್ಕೆ ಬಂದಿಲ್ಲವೆಂತಲೇ ಹೇಳಬೇಕಾದ ವಿಷಯಗಳಿವೆ.
1. ವಿಶ್ವಸಂಸ್ಥೆ ಮತ್ತು ಭಾರತದ ಮಕ್ಕಳ ತಜ್ಞರು 6
ವರ್ಷಗಳೊಳಗೆ ಮಗುವಿನ ಗ್ರಿಪ್ಪಿಂಗ್ ಸರಿಯಾಗಿ ಬಂದಿರುವುದಿಲ್ಲ. ಅದಕ್ಕಾಗಿ ನಲಿ, ಕಲಿ ವಿಧಾನದಲ್ಲಿ ನಿಧಾನವಾಗಿ ಬರೆಸುವ ಪ್ರಕ್ರಿಯೆ ಶುರುವಾಗಬೇಕು
ಎನ್ನುತ್ತಾರೆ. ಶಿಕ್ಷಣ ತಜ್ಞೆ ಮರಿಯಾ ಮಾಂಟೆಸರಿ 6 ವರ್ಷಗಳೊಳಗಿನ ಮಗುವಿಗೆ ಬರೆಸುವುದೇ ದೊಡ್ಡ ತಪ್ಪು
ಎನ್ನುತ್ತಾರೆ. ಆದರೆ ಇಲ್ಲಿ 6 ವರ್ಷದ ಮಗು ಅದಾಗಲೇ ಕನ್ನಡದ ಅ, ಆ , ಇ, ಈ ಕಲಿತಿರಬೇಕು ಅಥವಾ ಕಲಿತಿರುತ್ತದೆ
ಎಂದು ನಿರೀಕ್ಷಿಸಲಾಗಿದೆ ಮತ್ತು ಭಾವಿಸಲಾಗಿದೆ.
2. ಈಗ 1ನೇ ತರಗತಿಗೆ ಹಾಜರಾದ ಮಕ್ಕಳಲ್ಲಿ 7-8 ವರ್ಷಗಳ
ಮಕ್ಕಳೂ ಇದ್ದಾರೆ. ಕೊರೊನ ಕಾಲದಲ್ಲಿ ಮನೆಯಲ್ಲೇ ಉಳಿದ ಮಕ್ಕಳು ಈಗ ಒಂದನೇ ತರಗತಿಗೆ ದಾಖಲಾಗಿದ್ದಾರೆ.
ಅವರೊಂದಿಗೆ 5-6 ವರ್ಷಗಳ ಮಗುವೂ ಸೇರಿಕೊಂಡಿದೆ. ಇಲ್ಲಿ 7-8ನೇ ವಯಸ್ಸಿನಲ್ಲಿರುವ ಎರಡು, ಮೂರನೇ ತರಗತಿಯಲ್ಲಿರಬಹುದಾದ
ಮಗು ಕೆಲವೊಂದು ಪಾಠಗಳನ್ನು ಬೇಗನೇ , ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತದೆ. 5-6ನೇ ವಯಸ್ಸಿನ ಮಗು
ಹಿಂದುಳಿಯುತ್ತದೆ. ಇದು ಕಲಿಸುವ ವಿಷಯದಲ್ಲಿ ತಾರತಮ್ಯವನ್ನು ಸೃಷ್ಟಿಸುತ್ತಿದೆ.
3. ಅದೇ ಸಿಬಿಎಸ್ ಸಿ ಪಠ್ಯಕ್ರಮದ ಹಿಂದಿ ಪಾಠಗಳನ್ನು
ನೋಡಿದರೆ ಎಲ್ಲೂ ಹಿಂದಿಯನ್ನು ಮಗು ಅದಾಗಲೇ ಕಲಿತು ಬಂದಿದೆ ಎಂದು ಪರಿಗಣಿಸುವುದಿಲ್ಲ. ಈಗಷ್ಟೇ ವ್ಯವಸ್ಥಿತವಾಗಿ,
ನೆನಪಿಟ್ಟುಕೊಳ್ಳಲು ಸುಲಭವಾಗುವ ಹಾಗೆ ನಿಧಾನವಾಗಿ ಕಲಿಸಲಾಗುತ್ತದೆ. ಜನಪ್ರಿಯ ಆಂಗ್ಲಭಾಷೆಯನ್ನೂ
ಸಹ ವಾಕ್ಯಗಳನ್ನು ಬರೆಸುವ ಹಂತಕ್ಕೆ ಕೊಂಡೊಯ್ಯುವುದಿಲ್ಲ. ಮೊದಲಿಗೆ ಅಕ್ಷರಗಳು, ನಂತರ ಆ ಅಕ್ಷರಗಳ
ವ್ಯತ್ಯಾಸಗಳು (ಸ್ವರ ಮತ್ತು ವ್ಯಂಜನ), ಅವು ಶಬ್ಧಗಳಾಗುವ ಬಗೆ ಫೋನಿಕ್ಸ್ ಮತ್ತು ವರ್ಲ್ಡ್ ಫ್ಯಾಮಿಲಿ
ಹೀಗೆ ಕಲಿಕೆ ವ್ಯವಸ್ಥಿತವಾಗಿದೆ.
4. ಪ್ಲೆವೇ ವಿಧಾನದಲ್ಲಿರಲಿ, ಮಾಂಟೆಸರಿಯಲ್ಲಿರಲಿ
ಕನ್ನಡದ ಕಾಗುಣಿತ ಮನೆಯಲ್ಲಿ ಹೇಳಿಕೊಡದ ಹೊರತು 3-6 ವರ್ಷಗಳ ಒಳಗಿನ ಮಗು ಕಲಿಯತಿರುವುದು ಬಹಳ ಅಪರೂಪ.
ಇನ್ನೂ ಆಡಿಕೊಂಡಿರುವ ವಯಸ್ಸಿನಲ್ಲಿ ಅದಾಗಲೇ ಸಾಕಷ್ಟು ಮಾಹಿತಿಗಳು, ಹಾಡುಗಳು ಎಲ್ಲವನ್ನೂ ಆಂಗ್ಲಭಾಷೆಯಲ್ಲಿ
ಕಲಿತಿರುತ್ತದೆ. ಮನೆಯಲ್ಲಿ ದೊಡ್ಡವರು ಹೇಳಿಕೊಟ್ಟರೂ ಅದು ಹೊರಗಿನ ಈ ಕಲಿಕೆಯ ಜೊತೆಗೆ ಮಗುವಿಗೆ ಭಾರವೆ.
ಇನ್ನು ಅಂಗನವಾಡಿಯಲ್ಲಿ ಕಲಿತ ಮಗು ಎಂತಿಟ್ಟುಕೊಂಡರೂ ಕನ್ನಡ ಶಾಲೆಗೆ ದಾಖಲಾಗುವಾಗ ಕನ್ನಡ ಕಾಗುಣಿತ
ಕಲಿತಿರುವುದೂ ಕಷ್ಟ. ಕನ್ನಡ ಶಾಲೆಗೆ ಸೇರುತ್ತದೆಯೇ ಹೊರತು ಸಿಬಿಎಸ್ ಸಿ ರಾಷ್ಟ್ರೀಯ ಪಠ್ಯಕ್ರಮಕ್ಕೆ
ದಾಖಲಾಗುವುದು ವಿರಳಾತಿವಿರಳ. ಪಠ್ಯಕ್ರಮ ಸಿದ್ಧಪಡಿಸಿದವರ ಈ ಗ್ರಹಿಕೆಯೂ ಇಲ್ಲಿ ಸೋಲುತ್ತದೆ.
5. ಅತಿಯಾದ ಸಂಸ್ಕೃತ ಶಬ್ಧಗಳು ಇದರಲ್ಲಿವೆ. ಕನ್ನಡ
ಭಾಷೆಯ ಶಬ್ಧಗಳನ್ನು ತೆಗೆದರೆ ಶೇ.10-20 ರಷ್ಟು ಮಾತ್ರ ಕಾಣಸಿಗುತ್ತದೆ. ದಿನಬಳಕೆಯ ಶಬ್ಧಗಳು ಇಲ್ಲವೇ
ಇಲ್ಲ ಎನ್ನಬಹುದು. ಇದೂ ಸಹ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕೆಲಸವೇ ಆಗಿದೆ.
ಪರಿಣಾಮ
ಏನು?
ಭಾಷೆಯ
ಮೇಲೆ
·
ಮಗು
ಕನ್ನಡವೆಂದರೆ ಕಷ್ಟದ ವಿಷಯ ಎಂದು ಭಾವಿಸುತ್ತದೆ. ವರ್ಷ ಕೊನೆಗೊಳ್ಳುವ ಹೊತ್ತಿಗೆ ಕನ್ನಡವನ್ನು ದ್ವೇಷಿಸುತ್ತದೆ.
·
ವಿದ್ಯಾರ್ಥಿಗಳ
ಮಧ್ಯೆ ಕಲಿಕೆಯ ತಾರತಮ್ಯ ಹೆಚ್ಚಾಗುತ್ತದೆ.
·
ಮಗುವಿನ
ಮಾನಸಿಕ ಒತ್ತಡ ಹೆಚ್ಚಾಗುತ್ತದೆ,
·
ಕನ್ನಡವೂ
ಸೇರಿದಂತೆ ಉಳಿದ ವಿಷಯಗಳ ಬರವಣಿಗೆಯಲ್ಲೂ ಹಿಂದೆ ಬೀಳುತ್ತದೆ.
·
ಮಗು
ಬೆಳೆದ ಹಾಗೆಲ್ಲ ಸುಲಭವಾಗಿ, ಸರಳವಾಗಿ ಕಲಿಸಿದ ಆಂಗ್ಲ ಮತ್ತು ಹಿಂದಿ ಭಾಷೆಗಳನ್ನು ಹೆಚ್ಚು ಇಷ್ಟಪಡುತ್ತ,
ಅರಳುವ ಮೊದಲೇ ಬಿರಿದ ಹೂವಿನ ಹಾಗೆ ಕನ್ನಡ ಭಾಷೆಯ ಕಲಿಕೆಯಲ್ಲಿ ನಲುಗುತ್ತದೆ. ಕನ್ನಡವನ್ನು ಸುಪ್ತವಾಗಿ
ದ್ವೇಷಿಸುತ್ತದೆ. ಅದರ ಫಲವನ್ನು ಈಗಾಗಲೇ 50% ರಷ್ಟು ಯುವಜನಾಂಗದಲ್ಲಿ ಕಾಣುತ್ತಿದ್ದೇವೆ. ಆ ಅಂಶ
100% ರಷ್ಟಾಗಲು ಏನೇನು ಮಾಡಬೇಕೊ ಅದೆಲ್ಲವನ್ನೂ ಈ ಪಠ್ಯಕ್ರಮ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಗುವಿನ ಮಾನಸಿಕ ಆರೋಗ್ಯದ ಮೇಲೆ – ಆರು ವರ್ಷದ
ಮಗು ಈಗ ಕೇವಲ ಕಾಗುಣಿತ, ಮಗ್ಗಿ ಕಲಿಯುವುದಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ
ಮತ್ತು ಕಂಪ್ಯೂಟರ್ ಇಷ್ಟನ್ನು ಕಲಿಯುತ್ತಿರುತ್ತದೆ. ಕನ್ನಡವನ್ನು ಒಂದೇ ವರುಷದಲ್ಲಿ ಹೇಳಿಕೊಡಲು ಹೊರಟಾಗ
ಮಗುವಿನ ಮೇಲೆ ಅದಾಗಲೇ ಇರುವ ಒತ್ತಡಕ್ಕೆ ಇನ್ನಷ್ಟು ಸೇರಿಸಿದಂತಾಗುತ್ತದೆ. ಒತ್ತಡ ಹೆಚ್ಚಾಗುವುದರ
ಪರಿಣಾಮ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ, ಶಾಲೆಗೆ ಹೋಗಲು ನಿರಾಕರಿಸುತ್ತದೆ. ತನ್ನ ಒತ್ತಡ,
ಆತಂಕಗಳನ್ನು ಮೀರಲು ಮೊಬೈಲ್ ನೋಡುವುದು, ದುಶ್ಚಟಗಳಿಗೆ
ಬೀಳುವುದು ಮತ್ತಿತರ ಅಡ್ಡದಾರಿಯನ್ನು ಹಿಡಿಯುತ್ತದೆ. ದೈಹಿಕ ಆರೋಗ್ಯದ ಮೇಲೆ – ಆಗಿನ್ನೂ ಪೆನ್ಸಿಲ್ ಹಿಡಿಯಲು ಕಲಿತ
ಮಗು ಅಗತ್ಯಕ್ಕಿಂತ ಹೆಚ್ಚು ಬರೆದಾಗ ಕೈನೋವಿನಿಂದ ನರಳುತ್ತದೆ. ಇನ್ನೂ ಬಲಿತಿಲ್ಲದ ಕೈಯ ನರಗಳ ಮೇಲೆ
ಪರಿಣಾಮವಾಗುತ್ತದೆ. ಒತ್ತಡದಿಂದಾಗಿ ಮನೋದೈಹಿಕ ಸಮಸ್ಯೆಗಳಾದ ಜ್ವರ, ಭೇದಿ, ನೆಗಡಿ, ತಲೆನೋವಿನಂತಹ
ಸಮಸ್ಯೆಗಳನ್ನು ಹೊಂದುತ್ತದೆ.
ನೈತಿಕ ಮೌಲ್ಯದ ಮೇಲೆ ಪರಿಣಾಮ – ಈ ಮಕ್ಕಳ ಒದ್ದಾಟ
ನೋಡಲಾಗದೆ, ಮಕ್ಕಳು ಬರೆಯುವುದನ್ನು ನಿರಾಕರಿಸಿದಾಗ, ಪಾಲಕರು (ವಿಶೇಷವಾಗಿ ತಾಯಿ) ಖುದ್ದು ಬರೆದುಕೊಡುತ್ತಾರೆ.
ಇದರಿಂದ ಮಕ್ಕಳು ಒಂದನೆ ತರಗತಿಯಿಂದಲೇ ಮೋಸ ಮಾಡುವುದನ್ನು ಪಾಲಕರಿಂದಲೇ ಕಲಿಯುತ್ತವೆ. ಕೇಳಿದಾಗ ಇಲ್ಲ,
ನಾನೇ ಬರೆದಿದ್ದೇನೆ ಎಂದು ಸುಳ್ಳು ಹೇಳುವವರೂ ಇದ್ದಾರೆ. ಬೇರೆ ಮಕ್ಕಳಿಂದ ಬರೆಸಿಕೊಳ್ಳುವ , ಬರೆಸಿಕೊಳ್ಳಲು
ಅವರು ಹೇಳಿದ್ದನ್ನು ಮಾಡುತ್ತಾರೆ. ಆ ಮೂಲಕ ಲಂಚ, ಲಾಬಿ ಎಲ್ಲಾ ಬೇಡದ ಗುಣಗಳನ್ನು ಕಲಿಯುತ್ತಿದ್ದಾರೆ.
ಶಿಕ್ಷಣದ ಮೇಲೆ – ಉರು ಹೊಡೆಯುವುದು/ ಬಾಯಿಪಾಠ
ಮಾಡುವುದು ಕಲಿಯುತ್ತಾರೆ. ವಿಷಯಗಳ ಅಧ್ಯಯನಶೀಲ ಮನೋಭಾವನೆಯನ್ನು ಈ ಹಂತದಲ್ಲಿಯೇ ಕೊಲ್ಲಲಾಗುತ್ತಿದೆ.
ಒಂದೇ ವಿಷಯವನ್ನು ಮರು ವರ್ಷಗಳಲ್ಲಿಯೂ ಕಲಿತು ಕಲಿತು ಬೇಸರವಾಗಿ ಶಾಲೆ, ಕಾಲೇಜುಗಳೆಂದರೆ ಓಡಿಹೋಗುವಂತಾಗಿದೆ.










