ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?


ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ಅವಕಾಶವಿದ್ದಾಗ. ಕೆಲವೊಮ್ಮೆ ಯಾವುದೂ ಇಲ್ಲದಿದ್ದಾಗಲೂ ಅವಕಾಶ ಸೃಷ್ಟಿಸಿಕೊಳ್ಳಲಾಗುತ್ತದೆ ಭ್ರಷ್ಟಾಚಾರದ ಮೂಲಕ. ಅದು ವ್ಯವಸ್ಥೆಯ ಜೊತೆಗೆ ವ್ಯವಸ್ಥೆಯಲ್ಲಿನ ಆತ್ಮಸಾಕ್ಷಿಯನ್ನೂ ಕೊಲ್ಲುತ್ತದೆ. ಅಸಮಾನತೆ, ಅರಾಜಕತೆ ಮತ್ತು ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತದೆ. ಯಾವುದೇ ಬಗೆಯ ಅಧಿಕಾರ ಮನುಷ್ಯನ ಅಸಲಿ ಮುಖವನ್ನು ತೋರಿಸುತ್ತದೆ. ಅಂತಹ ಅಸಲಿ ಮುಖಗಳಲ್ಲೊಂದು ಭ್ರಷ್ಟಾಚಾರ. ಭ್ರಷ್ಟಾಚಾರದಲ್ಲಿ ಹಲವು ಬಗೆ. ಮೋಸ, ಸುಳ್ಳು, ವಂಚನೆ, ಹೆದರಿಸುವಿಕೆ, ಬೇಡಿಕೆ ಇಡುವಿಕೆ, ಪ್ರಲೋಭನೆ, ಒತ್ತಡ ತರುವುದು ಇತ್ಯಾದಿ ರೂಪದಲ್ಲಿ ಅದು ಕಾಣಿಸುತ್ತದೆ.

ಯಾವುದೇ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಂಪರ್ಕ ಅಥವಾ ಸಂಪನ್ಮೂಲದ ಬಲದಿಂದ ತನಗೆ ಬೇಕಾದುದನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಾದರೆ ಆ ವ್ಯವಸ್ಥೆಯಲ್ಲಿ ಸಮಾನತೆ ಇಲ್ಲವೆಂತಲೇ ಅರ್ಥ. ಇಂತಹ ಅಸಮಾನತೆ ಸೃಷ್ಟಿಸುವ ಯಾವುದೇ ವ್ಯವಸ್ಥೆ ನ್ಯಾಯಯುತ ಬದುಕಿಗೆ ಅಪಾಯವೆ. ಎಲ್ಲಿ ನ್ಯಾಯಯುತ ಬದುಕು ಸಾಧ್ಯವಿಲ್ಲವೊ ಅಲ್ಲಿ ಜನತಂತ್ರ ಸಹ ಸಂಕಷ್ಟದಲ್ಲಿರುತ್ತದೆ. ಈ ಸಂಕಷ್ಟಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಚಾಣಕ್ಯನಂತಹ ರಾಜನೀತಿಜ್ಞನೂ ಸಹ ಹೆಣಗಾಡಿದ್ದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಪ್ರಸ್ತುತ ಆಧುನಿಕ ರಾಜಕಾರಣದಿಂದ ಶೈಕ್ಷಣಿಕ ಕ್ಷೇತ್ರದವರೆಗೆ ಈ ಹೆಣಗಾಟ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ.

ಶಾಲೆಯಲ್ಲಿ ಮಕ್ಕಳಿಗೊಂದು ಹುದ್ದೆ ಕೊಟ್ಟು ನೋಡಿ. ಆ ತರಗತಿಯ ನಾಯಕ/ನಾಯಕಿಯನ್ನು ಉಳಿದ ಮಕ್ಕಳು ಹೇಗೆಲ್ಲ ನಿಯಂತ್ರಿಸುವ ಮತ್ತು ಬೇರೆ ಬೇರೆ ರೀತಿಯಲ್ಲಿ ತಮ್ಮ ಹಿತಾಸಕ್ತಿಯನ್ನು ಈಡೇರಿಸುವ ಹಾಗೆ ಮಾಡುತ್ತಾರೆ ಎಂದು. ಅದೇ ರೀತಿ ಅಧಿಕಾರ ಸಿಕ್ಕಿರುವ ಆ ನಾಯಕ/ನಾಯಕಿಯ ವರ್ತನೆಯನ್ನು ಗಮನಿಸಿ ನೋಡಿ. ಹೀಗೆ ಶಾಲಾ ಹಂತದಲ್ಲಿಯೇ ಅಧಿಕಾರ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ರೂಪದ ಭ್ರಷ್ಟಾಚಾರದ ಮನಸ್ಥಿತಿ ಬೆಳೆಯುತ್ತದೆ ಎಂದು ಸಾಮಾಜಿಕ ಅಧ್ಯಯನಗಳು ಹೇಳುತ್ತವೆ.  

          ಇವತ್ತು ಮಾನವೀಯ ಮೌಲ್ಯಗಳು ಮನೆಗಳಲ್ಲೇ ಕುಸಿದು ಹೋಗಿರುವಾಗ ಭ್ರಷ್ಟಾಚಾರದ ಬೆಳವಣಿಗೆಯ ದರವೂ ಹೆಚ್ಚಾಗಿದೆ. ಇದು ಕೇವಲ ಭಾರತದಲ್ಲಷ್ಟೇ ಅಲ್ಲ ವಿಶ್ವದ ಎಲ್ಲೆಡೆ ಜನತಂತ್ರಕ್ಕೆ ಮಾರಕವಾಗುತ್ತಿರುವುದನ್ನು ಮನಗಂಡು ಕಳವಳಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2003ರ ಅಕ್ಟೋಬರ್ 31ರಂದು ಭ್ರಷ್ಟಾಚಾರ ವಿರೋಧಕ್ಕೆಂದೇ ಒಂದು ದಿನವನ್ನು ಮೀಸಲಿಟ್ಟಿತು. ಅದೇ ಡಿಸೆಂಬರ್ 9. ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ.

ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ನಮ್ಮ ವಿರೋಧಪಕ್ಷಗಳು ಮರೆತೇ ಬಿಟ್ಟಿವೆ. ಮಾಧ್ಯಮಗಳಿಗೂ ನೆನಪಿದ್ದ ಹಾಗಿಲ್ಲ. ಎಲ್ಲರೂ ಇನ್ನೂ ನಿನ್ನೆ ಹೊರಬಂದ ರಾಜ್ಯಗಳ ಚುನಾವಣಾ ಫಲಿತಾಂಶದ ಗುಂಗಿನಲ್ಲೇ ಇದ್ದಾರೆ. ಆದರೆ ನಾವು ನಾಗರಿಕರು ಮರೆಯುವ ಹಾಗಿಲ್ಲ. ಪ್ರತಿದಿನವನ್ನೂ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸುವ ಬದ್ಧತೆಯನ್ನು ತೋರಿಸಬೇಕಾಗಿದೆ.

ಕರ್ನಾಟಕಕ್ಕೆ ಬಂದರೆ , ಜನರು ಅದಾಗಲೇ 10% ಭ್ರಷ್ಟಾಚಾರದ ಆರೋಪ ಹೊಂದಿದ ಕಾಂಗ್ರೆಸ್ ಸರಕಾರವನ್ನು ಮನೆಗೆ ಕಳಿಸಿ ಸಮ್ಮಿಶ್ರ ಸರಕಾರವನ್ನು ಆರಿಸಿ ಕಳಿಸಿದ್ದರು.. ಆದರೆ ಆ ಸರಕಾರವೂ ಭ್ರಷ್ಟಾಚಾರದ ಮತ್ತೊಂದು ರೂಪವಾದ ಆಪರೇಷನ್ ಕಮಲಕ್ಕೆ ಒಳಗಾಗಿ ಬಿದ್ದು ಹೋಯಿತು. ಈಗ 40% ಭ್ರಷ್ಟಾಚಾರದ ಆರೋಪ ಹೊಂದಿರುವ ಸರಕಾರವನ್ನೇ ಒಪ್ಪಿಕೊಂಡು, ಜೀ ಹುಜೂರ್ ಎನ್ನುತ್ತ ಅದರ ಗುಪ್ತ ಕಾರ್ಯಾಚರಣೆಗಳಿಗೆ, ಸಮಾಜ ಒಡೆಯುವ ತಂತ್ರಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕುಮ್ಮಕ್ಕು ಕೊಡುತ್ತಿದ್ದಾರೆ. ಇಲ್ಲಿ ಜನತಂತ್ರದ ಮೌಲ್ಯಗಳಿಗಿಂತಲೂ ಧರ್ಮ ಮತ್ತು ರಾಜಕಾರಣವೇ ಜನಮಾನಸದಲ್ಲಿ ಗೆಲ್ಲುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ. ಒಂದೆಡೆ ಆರ್ಥಿಕತೆ ಕುಸಿಯುತ್ತಿದೆ. ನಿರುದ್ಯೋಗ ಹೆಚ್ಚಳವಾಗಿ ಜನರು ಕೆಲಸದ ಆಮಿಷಕ್ಕೆ ಒಳಗಾಗಿ ಕೈಯಲ್ಲಿರುವ ದುಡ್ಡನ್ನೆಲ್ಲ ಕಳೆದುಕೊಳ್ಳುತ್ತಿರುವ ಸುದ್ದಿ ಹೆಚ್ಚಾಗುತ್ತಿದೆ. ಸಮಾಜದ ಕೆಳವರ್ಗದ ಮಹಿಳೆಯರು ದಿಕ್ಕುಗಾಣದೆ ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕ ಸಂಘಟನೆಗಳು, ಗುತ್ತಿಗೆದಾರರು ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಆದರೂ ಜನರು ಧರ್ಮರಾಜಕಾರಣದಿಂದ ಹೊರಬರದೆ ಸಮೂಹಸನ್ನಿಗೆ ಒಳಗಾದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ನಂಬುವುದು ಮತ್ತು ಹರಡುವುದನ್ನು ಮುಂದುವರಿಸಿದ್ದಾರೆ. ಇದು ಯಾವ ಹಂತಕ್ಕೆ ಹೋಗುತ್ತದೆ ಎಂದು ಸಮಾಜ ವಿಜ್ಞಾನ ತಜ್ಞರು, ಆರ್ಥಿಕ ತಜ್ಞರು, ವಿಚಾರವಂತರೆಲ್ಲ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇವತ್ತಾದರೂ ಜನರು ಭ್ರಷ್ಟಾಚಾರವನ್ನು ವಿರೋಧಿಸುವ ಮನಸ್ಸು ಮಾಡದಿದ್ದರೆ ಭವಿಷ್ಯದಲ್ಲಿ ಮಕ್ಕಳೂ ಅದನ್ನು ಕಲಿಯುತ್ತಾರೆ. 40% ನ್ನು ಒಪ್ಪಿಕೊಂಡಿರುವ ಜನರು ನಾಳೆ 100% ಆದರೂ ನಮ್ಮವರು, ನಮ್ಮ ಮಂದಿ ಎನ್ನುವ ಧೃವೀಕರಣಕ್ಕೆ ಬಲಿಯಾಗಬಹುದು. ಒಂದು ವ್ಯವಸ್ಥೆ ಪ್ರಬಲವಾದಷ್ಟೂ ಭಯಗ್ರಸ್ತರು ಹೆಚ್ಚಾಗುತ್ತಾರೆ. ಈಗಾಗಲೇ ಅದರ ಝಲಕ್ ನಾವು ಕಾಣುತ್ತೇವೆ. ಭ್ರಷ್ಟಾಚಾರದ ಮನಸ್ಥಿತಿಯುಳ್ಳ ಜನರಿಗೆ ಹಣ ಮತ್ತು ಅಧಿಕಾರದ ಜೊತೆಗೆ ಸನ್ನಿಗೊಳಗಾದ ಜನಬಲವೂ ಸೇರಿಬಿಟ್ಟರೆ ಸರ್ವನಾಶಕ್ಕೆ ಮತ್ತೊಂದು ದಾರಿ ಬೇಕಿರುವುದಿಲ್ಲ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಲೇ ಬೇಕಾದ ಅನಿವಾರ್ಯ ಸಂದರ್ಭ ಇದಾಗಿದೆ.

 


ಶಾಲೆಗಳಲ್ಲಿ ಭಗವದ್ಗೀತೆ – ಬೇಕೊ? ಬೇಡವೊ?

ಶಾಲೆಗಳಲ್ಲಿ ಭಗವದ್ಗೀತೆ ಬೇಕೊ? ಬೇಡವೊ ಎನ್ನುವುದರಲ್ಲಿ ಮೂರು ವಿಚಾರಗಳಿವೆ. ಒಂದು ಇವತ್ತಿನ ಶಾಲೆಗಳು, ಮಕ್ಕಳು ಹೇಗಿದ್ದಾರೆ? ಭಗವದ್ಗೀತೆ ಮತ್ತು ಬೇಕು, ಬೇಡಗಳ ಪ್ರಶ್ನೆ. ಇದೆಲ್ಲವನ್ನೂ ಮೀರಿ ಈ ವಿಚಾರದ ಪ್ರಸ್ತುತತೆ. ಇವುಗಳ ಬಗ್ಗೆ ಒಂದೊಂದಾಗಿ ನೋಡೋಣ.

ಶಾಲೆ ಮತ್ತು ಮಕ್ಕಳು – ಇವತ್ತಿನ ಶಾಲೆ ಒಂದು ಕಾರ್ಖಾನೆ. ಇಲ್ಲಿ ಮಕ್ಕಳನ್ನು ಒಂದು ವಸ್ತುವನ್ನಾಗಿ ನೋಡಲಾಗುತ್ತದೆ. ಮಕ್ಕಳು ಇಲ್ಲಿ ಭವಿಷ್ಯದ ಉದ್ಯೋಗಕ್ಕಾಗಿ ಓದಲು ಬರುತ್ತಾರೆಯೇ ಹೊರತು ವ್ಯಕ್ತಿತ್ವ ವಿಕಸನಕ್ಕಲ್ಲ. ಇದು ಹೇಗೆ ನಿರೂಪಿತವಾಗುತ್ತದೆಯೆಂದರೆ ಕರ್ನಾಟಕದ ಸಾವಿರಾರು ಶಾಲೆಗಳು ಆಟದ ತರಗತಿಯನ್ನು ತರಗತಿಯ ವೇಳಾಪಟ್ಟಿಯಲ್ಲಿ ಸೇರಿಸಿವೆ. ಆದರೆ ಬಹುತೇಕ ಶಾಲೆಗಳು ಆಟದ ತರಗತಿಯಲ್ಲೂ ಸಹ ಮಕ್ಕಳಿಗೆ ಆಟಕ್ಕೆ ಬಿಡುವುದಿಲ್ಲ. ವಾಚನಾಲಯ ಇರುತ್ತದೆ. ಆದರೆ ಲೈಬ್ರರಿ ಪಿರಿಯಡ್ ನಲ್ಲಿ ಎಷ್ಟು ಮಕ್ಕಳು ವಾಚನಾಲಯಕ್ಕೆ ಹೋಗಿ ಓದುತ್ತಾರೆ? ಸ್ಪರ್ಧೆಗಳಿರುತ್ತವೆ. ಸ್ಪರ್ಧೆಗಳಲ್ಲಿ ಕೆಲವರು ಯಾವಾಗಲೂ ಭಾಗವಹಿಸುತ್ತಾರೆ. ಅವರಲ್ಲಿ ಕೆಲವರು ಪ್ರತಿಭಾವಂತರಾಗಿರಲಿ, ಬಿಡಲಿ ಬಹುಮಾನ ಪಡೆದೇ ಪಡೆಯುತ್ತಾರೆ. ಹೀಗೆ ಹೆಸರಿಗೆ ಮಾತ್ರ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆ ಎನ್ನುವ ಹಾಗಾಗಿದೆ. ಒಂದು ಕಾಲದಲ್ಲಿ ಶಾಲೆಯ ಆವರಣವನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸುವ, ಕೈತೋಟಗಳನ್ನು ಮಾಡುವ, ಮಕ್ಕಳೇ ಬೆಳೆಸಿದ ಹಣ್ಣು, ತರಕಾರಿಗಳನ್ನು ಅವರೇ ತಿನ್ನುವಂತೆ ಮಾಡುವ ಶಾಲೆಗಳು ಯಥೇಚ್ಛವಾಗಿದ್ದವು. ಆದರೆ ಈಗ ಅವುಗಳು ಅಲ್ಲೊ ಇಲ್ಲೊ ಇದ್ದರೆ ಅದೊಂದು ವಿಶೇಷ ಸುದ್ದಿ. ಆದ್ದರಿಂದ ಮಕ್ಕಳು ಮನೆಯಲ್ಲಷ್ಟೇ ಅಲ್ಲ ಶಾಲೆಯಲ್ಲಿ ಸಹ ಬದುಕಿನ ಯಾವ ಪಾಠವನ್ನೂ ಕಲಿಯುತ್ತಿಲ್ಲ.

ಭಗವದ್ಗೀತೆ – ಇದು ಎಡಪಂಥೀಯರ ಕಣ್ಣಲ್ಲಿ ಮನುವಾದಿ ಗ್ರಂಥವಾಗಿಯೂ ಬಲಪಂಥೀಯರಲ್ಲಿ ಗೌರವಾನ್ವಿತ ಧಾರ್ಮಿಕಗ್ರಂಥವಾಗಿಯೂ ಪರಿಗಣಿಸಲ್ಪಟ್ಟಿದೆ. 14ನೆಯ ವಯಸ್ಸಿನಿಂದ – 18 ವರ್ಷವಯಸ್ಸಿನವರೆಗೆ ಪ್ರತಿದಿನ ಭಗವದ್ಗೀತೆಯನ್ನು ಓದಿ ಅದರ ಪ್ರತಿ ಶ್ಲೋಕವನ್ನು ತಲೆಗೆ ತೆಗೆದುಕೊಂಡು ಮುಂದಿನ 22 ವರ್ಷಗಳ ಕಾಲ ಅವುಗಳನ್ನು ಜೀವನದಲ್ಲಿ ಪ್ರಯೋಗಿಸಿ, ಅಧ್ಯಯನ ನಡೆಸಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಆದ್ದರಿಂದ ಇದು ಧಾರ್ಮಿಕ ಗ್ರಂಥವಲ್ಲ, ಮನುವಾದಿ ಗ್ರಂಥವೂ ಅಲ್ಲ. ಇದು ಜಗತ್ತಿನ ಅತ್ಯಂತ ಶ್ರೇಷ್ಠವಾದ ವ್ಯಕ್ತಿತ್ವ ವಿಕಸನದ ಗ್ರಂಥ, ಮನಶಾಸ್ತ್ರೀಯ, ತತ್ತ್ವಶಾಸ್ತ್ರೀಯ ಮತ್ತು ಸಮಾಜ ವಿಜ್ಞಾನದ ಗ್ರಂಥವೆಂದು ನಾನು ಭಾವಿಸುತ್ತೇನೆ.

ಭಗವದ್ಗೀತೆಯಲ್ಲಿ ಬರುವ ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ವಿಚಾರವಾದಿಗಳ ಆಕ್ಷೇಪವಿದೆ. ಅದು ತಪ್ಪಲ್ಲ. ಯಾಕೆಂದರೆ ಭಗವದ್ಗೀತೆಯನ್ನು ಆಳವಾಗಿ ಅಧ್ಯಯನ ಮಾಡಿದವರು ಅವರ ಆಕ್ಷೇಪಕ್ಕೆ ಸಮರ್ಪಕವಾದ ಉತ್ತರ ಕೊಡುವುದರಲ್ಲಿ ವಿಫಲರಾಗಿದ್ದಾರೆ. ಭಗವದ್ಗೀತೆಯಲ್ಲಿ ಬರುವ ಬ್ರಾಹ್ಮಣ, ಕ್ಷತ್ರಿಯ , ವೈಶ್ಯ, ಶೂದ್ರ ಇವರುಗಳು ಸಮಾಜದಲ್ಲಿ ನಾವು ನೋಡುವ ಅಥವಾ ಮಾಡಿಕೊಂಡ ಶ್ರೇಣೀಕೃತ ವ್ಯವಸ್ಥೆ ಅಲ್ಲ. ಇದು ಜೀವಗಳಲ್ಲಿ ಸ್ವಭಾವ ಮತ್ತು ಸ್ವಭಾವಕ್ಕೆ ತಕ್ಕಂತೆ ಮಾಡುವ ಕೆಲಸದಿಂದಾಗಿ ಗುರುತಿಸುವ ಒಂದು ಪ್ರಕ್ರಿಯೆ. ಹಾಗಾಗಿಯೇ ಜ್ಯೋತಿಷ್ಯದಲ್ಲಿ ಯಾರದ್ದೇ ಜಾತಕ ನೋಡುವಾಗ ವ್ಯಕ್ತಿಯ ಬಗ್ಗೆ ಇವೆಲ್ಲ ವಿವರಣೆ ಇರುತ್ತದೆ. ಅವನು ಯಾವ ಯೋನಿ, ಗಣ, ವರ್ಣ (ಇದೇ ಈ ಜಾತಿಯ ಜಗಳಕ್ಕೆ ಮುಂದಿನ ದಿನಗಳಲ್ಲಿ ಕಾರಣವಾಗಿದ್ದು.) ಹೀಗೆ. ನನ್ನ ಅಧ್ಯಯನದಲ್ಲಿ ನಾನು ಕಂಡಿದ್ದು ಈ ಗಣ, ಯೋನಿ , ವರ್ಣಗಳೆಲ್ಲ ಎಷ್ಟು ನಿಖರವಾಗಿರುತ್ತವೆ ಎಂದರೆ ವ್ಯಕ್ತಿ ತನ್ನ ಮೂಲ ದ್ರವ್ಯವಾದ ಯೋನಿ, ಗಣ ಹಾಗೂ ವರ್ಣದ ಸ್ವಭಾವದಂತೆ ನಡೆದುಕೊಳ್ಳುತ್ತಾನೆ. ರಾಕ್ಷಸ, ದೇವ ಮತ್ತು ಮನುಷ್ಯ ಗಣಗಳ ವರ್ಣನೆ ಏನು ಬರುತ್ತದೆ ಭಗವದ್ಗೀತೆಯಲ್ಲಿ ಅದು ಯಾವುದೋ ಜನಾಂಗಕ್ಕೆ ಸೀಮಿತವಾದದ್ದಲ್ಲ. (ದ್ರಾವಿಡರು ರಾಕ್ಷರಾಗಿ ಪರಿಗಣಿಸಲ್ಪಟ್ಟರು, ಆರ್ಯರು ದೇವರಾದರು ಎನ್ನುವುದು, ರಾಕ್ಷಸರೆಂದು ಪರಿಗಣಿಸಿ ದೂರವಿಟ್ಟಿದ್ದರು ಎನ್ನುವದೆಲ್ಲ ಅಧ್ಯಯನದ ಕೊರತೆಯಿಂದ ಹುಟ್ಟಿದ ಅಪಸವ್ಯಗಳು.) ಇದು ಮನುಷ್ಯನ ಸ್ವಭಾವವನ್ನು ವೈಜ್ಞಾನಿಕವಾಗಿ ತಿಳಿಸುವ ಮಾಧ್ಯಮ. ಭಗವದ್ಗೀತೆಯಲ್ಲಿ ಕೃಷ್ಣ ಈ ಸ್ವಭಾವವನ್ನು ಗುರುತಿಸಿಕೊಂಡು ಅವುಗಳಿಂದ ಬಿಡುಗಡೆಗೊಳ್ಳುತ್ತ ಹೋಗುವುದು ಹೇಗೆ? ಎನ್ನುವುದನ್ನು ಮನಶಾಸ್ತ್ರೀಯ ತಜ್ಞನಾಗಿ, ಆಧ್ಯಾತ್ಮಿಕ ಗುರುವಾಗಿ ಹೇಳುತ್ತಾನೆ. ಅದಕ್ಕೇ ಆತನಿಗೆ ಕೃಷ್ಣಂ ವಂದೇ ಜಗದ್ಗುರುಂ ಎನ್ನಲಾಯಿತು. ಈ ಗುಣ, ಗಣ, ವರ್ಣಗಳೆಲ್ಲ ಕೇವಲ ಮನುಷ್ಯನಿಗೆ ಸೀಮಿತವಾದವುಗಳೇ? ಇಲ್ಲ. ಒಂದು ಮಂಗನಂತಹ ಪ್ರಾಣಿಗಳಿಗೂ ಇದು ಅನ್ವಯವಾಗುತ್ತದೆ. ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಯಾವ ಪ್ರಾಣಿಯಾಗಿದ್ದರೂ ಸರಿ ಈ ಗುಣ, ಗಣ, ವರ್ಣಗಳಂತೆಯೇ ನಡೆದುಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿ ನಾವು ಮನೆಯಲ್ಲಿ ಸಾಕುವ ನಾಯಿ, ಪ್ರಾಣಿಗಳಿಂದ ಹಿಡಿದು ಕೀಟ, ಪಕ್ಷಿಗಳವರೆಗೆ ಗಮನಿಸಬಹುದು. ನನ್ನ ಈ ಹೇಳಿಕೆಗೆ ನಿಮ್ಮ ತಕರಾರಿದ್ದರೆ ಇವತ್ತಿನಿಂದ ನಿಮ್ಮ ಹತ್ತಿರದಲ್ಲಿ ಹುಟ್ಟುವ ಮಗುವಿನಿಂದ ಹಿಡಿದು ಪಶು, ಪಕ್ಷಿಗಳ ಹುಟ್ಟಿದ ಸಮಯವನ್ನು ಹಾಕಿ ಜಾತಕ ಸಿದ್ದಪಡಿಸಿ. ಅದರ ಯೋನಿ, ಗಣ, ವರ್ಣ ಇವುಗಳನ್ನೂ, ನೀವು ಮಾಡಿದ ಜಾತಕರ ಸ್ವಭಾವ, ನಡತೆ, ಮನಸ್ಥಿತಿಯನ್ನೆಲ್ಲ ಗಮನಿಸಿ ಪಟ್ಟಿಮಾಡಿ. ಆಮೇಲೆ ಇಲ್ಲಿ ಕಮೆಂಟಿಸಿ. ಇದು ಭಗವದ್ಗೀತೆ ಶಾಲಾ ಮಕ್ಕಳಿಗೆ ಸರಳವಾಗಿ ಪಠ್ಯ ಮಾಡಿಸುವ ಗ್ರಂಥವಲ್ಲ ಎಂಬುದಕ್ಕೆ ಉದಾಹರಣೆ.

ಶಾಲೆಗಳಲ್ಲಿ ಭಗವದ್ಗೀತೆಯನ್ನು ಹೇಳಿಕೊಡುವುದು ಹೊಸತಲ್ಲ. ಯೋಗ ಹೊರತಲ್ಲ. ನಾವು ನಮ್ಮ ಹೈಸ್ಕೂಲಿನಲ್ಲಿ ಭಗವದ್ಗೀತೆಯ ಕಂಠಪಾಠ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಪ್ರತಿ ವಿದ್ಯಾರ್ಥಿಯೂ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದುತ್ತಿದ್ದರು. ವರ್ಷಕ್ಕೊಮ್ಮೆ ಯೋಗಾಭ್ಯಾಸ ಶಿಬಿರ ನಡೆಯುತ್ತಿತ್ತು. ಆದರೆ ಇವುಗಳ ಪರಿಣಾಮ ಎಷ್ಟು ಮಕ್ಕಳ ಜೀವನದಲ್ಲಿ ಕಂಡಿದೆ ಎಂಬುದರ ಅಧ್ಯಯನವಾಗಬೇಕಿತ್ತು, ಆಗಲಿಲ್ಲ. ಆದರೂ ಸುತ್ತಮುತ್ತಲಿನ ನಮ್ಮ ಬ್ಯಾಚ್ ಮೇಟ್ ಗಳನ್ನು ತೆಗೆದುಕೊಂಡರೆ ಹೆಚ್ಚಿಗೆ ಏನು ಬದಲಾವಣೆ ಆಗಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಅದೇ ಕೃಷ್ಣ ಹೇಳಿದ್ದಾನಲ್ಲ, ನಿಮ್ಮ ನಿಮ್ಮ ವರ್ಣ, ಗುಣ, ಗಣಗಳಿಗೆ ತಕ್ಕಂತೆ ನಿಮ್ಮ ಗ್ರಹಿಸುವ, ಯೋಚಿಸುವ ಸಾಮರ್ಥ್ಯ ಬೆಳೆಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಇವತ್ತು ಬ್ರಾಹ್ಮಣ ಜಾತಿಯವರ ಮನೆಯಲ್ಲಿ ಹುಟ್ಟಿದ್ದೂ ವೈಶ್ಯ, ಶೂದ್ರ ಮತ್ತು ಕ್ಷಾತ್ರಗುಣಗಳನ್ನು, ಕರ್ಮಗಳನ್ನು ಜನರು ವ್ಯಕ್ತಪಡಿಸುತ್ತಾರೆ. ದಲಿತರ ಮನೆಯಲ್ಲಿ ಹುಟ್ಟಿದ್ದರೂ ಅಂಬೇಡ್ಕರ್ ಅಂತಹ ಮೇಧಾವಿಗಳು ಕಾಣಸಿಗುತ್ತಾರೆ. ರಾಜರ ಅರಮನೆಗಳಲ್ಲಿ ರಣಹೇಡಿಗಳು ಹುಟ್ಟುತ್ತಾರೆ. ಇವೆಲ್ಲವನ್ನೂ ನೀವು ಗಮನಿಸಿದರೆ ಈ ವರ್ಣಸಂಕರ, ಸತ್ವ,ರಜ,ತಮೊಗುಣ, ರಾಕ್ಷಸ, ದೇವ, ಮನುಷ್ಯಗಣಗಳ ವರ್ಗೀಕರಣ ತಿಳಿಯುತ್ತದೆ. ದೊಡ್ಡವರಿಗೇ ಅರ್ಥವಾಗದ ಈ ಕ್ಲಿಷ್ಟ ವಿಷಯಗಳು ಮಕ್ಕಳಿಗೆ ಸುಲಭಕ್ಕೆ ಅರ್ಥವಾಗುವುದೇ?

ಬೇಕೋ? ಬೇಡವೊ?- ನನ್ನ ಹಿಂದಿನೆರಡು ವಿಷಯಗಳನ್ನು ಓದಿದ ಮೇಲೆ ನೀವು ಗೊಂದಲಕ್ಕೆ ಬೀಳಬಹುದು. ಶಾಲೆಗಳು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕೊಡಬೇಕು ಎನ್ನುತ್ತೇನೆ. ಆದರೆ ಭಗವದ್ಗೀತೆಯಂತಹ ವ್ಯಕ್ತಿತ್ವ ವಿಕಸನದ ಗ್ರಂಥದ ಪಠ್ಟ ಶಾಲೆಗಳಲ್ಲಿ ಬೇಕಾ? ಎಂದು ಪ್ರಶ್ನೆಯನ್ನೂ ಮಾಡುತ್ತೇನೆ. ಹಾಗಿದ್ದರೆ ನಾನು ಏನನ್ನು ಪ್ರತಿಪಾದಿಸುತ್ತೇನೆ. ಇದು ಶಾಲೆಯ ಆಡಳಿತ ಮಂಡಳಿಗೆ ಬಿಟ್ಟ ವಿಚಾರವಾಗಬೇಕು ಎಂದು ನಾನು ಹೇಳುತ್ತೇನೆ. ಯಾಕೆಂದರೆ ಈ ರಾಜ್ಯದಲ್ಲಿ/ದೇಶದಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನ ಸೇರಿದಂತೆ ಹಲವು ಸಮುದಾಯಗಳ ಶಿಕ್ಷಣ ಸಂಸ್ಥೆಗಳಿವೆ. ಅವರಲ್ಲಿ ಹೆಚ್ಚಾಗಿ ಅವರ ಸಮುದಾಯದ ಜನರ ಮಕ್ಕಳೇ ಕಲಿಯುತ್ತಿದ್ದಾರೆ. ಆಗ ನೀವು ಭಗವದ್ಗೀತೆಯನ್ನು ಶಾಲಾ ಹಂತದಲ್ಲಿಯೇ ಕಲಿಸಬೇಕು ಎಂದು ಹೊರಟರೆ ಅದು ಸರಿಯಾಗುತ್ತದೆಯೇ? ಯಾಕೆಂದರೆ ಭಗವದ್ಗೀತೆ ಜನಮಾನಸದಲ್ಲಿ ಒಂದು ಧಾರ್ಮಿಕ ಗ್ರಂಥವೇ ಹೊರತು ವ್ಯಕ್ತಿತ್ವವಿಕಸನದ ಗ್ರಂಥವಲ್ಲ. ನೀವು ಭಗವದ್ಗೀತೆಯ ಯಾವ ಅಧ್ಯಾಯವನ್ನು ಮಕ್ಕಳಿಗೆ ಹೇಳಿಕೊಡುತ್ತೀರಿ ಎನ್ನುವುದೂ ಮುಖ್ಯ. ಕರ್ಮಯೋಗ ಹೇಳಿಕೊಟ್ಟರೆ ತಲೆಕೆಡಿಸಿಕೊಳ್ಳಬೇಡ ಅದಾಗಲೇ ಇವರೆಲ್ಲ ಸತ್ತು ನನ್ನೊಳಗಿದ್ದಾರೆ, ನೀನೊಂದು ನೆಪ ಮಾತ್ರ ಹೂಡು ಬಾಣ, ನಿನ್ನಲದಲ್ಲದೆಂದು ಯುದ್ಧ ಮಾಡು ಎನ್ನುವುದನ್ನೇ ಸರಿ ಬಿಡು ಕೃಷ್ಣನೇ ಹೇಳಿದ್ದಾನೆ, ನಾನು ಸಾಯಿಸಿದರೂ ಏನಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಯಾಕೆ ತೆಗೆದುಕೊಳ್ಳಬಾರದು? ಇನ್ನು ಸಾಂಖ್ಯಯೋಗ ಹೇಳಿಕೊಡುತ್ತೀರಾ? ಅಹಂ ಬ್ರಹ್ಮಾಸ್ಮಿ ಎನ್ನುವ ಶಂಕರಾಚಾರ್ಯರ ಮಾತನ್ನೇ ಅಪಥ್ಯವೆಂದು ಪ್ರತಿಪಾದಿಸುವವರಿದ್ದಾರೆ. ದ್ವೈತ, ಅದ್ವೈತದ ಮಧ್ಯೆಯೇ ಜಗಳಗಳಾಗುವುದಿದೆ. ಅಂತದರಲ್ಲಿ ಮಕ್ಕಳಿಗೆ ಇದು ಏನು ಅರ್ಥವಾದೀತು. ಅದರ ಬದಲು ನಮಗೆಲ್ಲ ಹೇಳಿಕೊಡುತ್ತಿದ್ದ ಭಗವದ್ಗೀತೆಯ ಭಕ್ತಿಯೋಗವೇ ಎಷ್ಟೋ ಉತ್ತಮ. ಸುಮ್ಮನೆ ಕಂಠಪಾಠ ಮಾಡಿದರಾಯಿತು. ತೆಗೆದುಕೊಂಡರೂ ಮಕ್ಕಳು ಓ ಭಗವಂತನಿಗೆ ಭಕ್ತಿಯಿಂದ ಏನು ಕೊಟ್ಟರೂ ನಡೆಯುತ್ತದಂತೆ, ಯಾವ ರೂಪದಲ್ಲಿ ಪೂಜಿಸಿದರೂ ಅವನಿಗೇ ಸೇರುತ್ತದಂತೆ ಎನ್ನುವ ಪ್ರಾಥಮಿಕ ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಬಹುದು. ಆದರೆ ಒಂದು ನೀವು ಈ ಭಾಗವನ್ನೇ ಸೇರಿಸಿದರೂ ಮುಸಲ್ಮಾನರ ನಿರಾಕಾರನಾದ ಭಗವಂತನ ಬಗ್ಗೆ, ಕ್ರಿಶ್ಚಿಯನ್ ರ ಪ್ರೇಮವೇ ದೇವರು ಎನ್ನುವ ಬಗ್ಗೆ, ಸೂಫಿ ಸಾಹಿತ್ಯ ಮತ್ತು ಭಕ್ತಿಯ ಪರಂಪರೆಯ ಬಗ್ಗೆ, ಬುದ್ಧನ ಜಾತಕ ಕತೆಗಳು ಸೇರಿದಂತೆ ಭಾರತದ ಪ್ರಮುಖ ಧಾರ್ಮಿಕ ಗ್ರಂಥಗಳಲ್ಲಿ ಬರುವ ಮನುಷ್ಯ ಜೀವಪರ ನಿಲುಮೆಗಳನ್ನು ಯಥಾವತ್ತಾಗಿ ಸೇರಿಸಬೇಕು. ಅಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯವಾದದ ಲೇಪವಿರಕೂಡದು. ಆದ್ದರಿಂದ ಭಗವದ್ಗೀತೆ ಶಾಲಾ ಪಠ್ಯವನ್ನು ಸೇರುವುದಾದರೆ ಯಾವ ಭಾಗ ಹೇಗೆ ಇರಬೇಕು ಎನ್ನುವುದು ಸ್ಪಷ್ಟವಾಗಬೇಕು. ಅದರ ಬಗ್ಗೆ ಸಮಾಜ ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚೆಗಳಾಗಬೇಕು. ಜೊತೆಗೆ ಅದು ಧರ್ಮಗಳ ಹಿನ್ನೆಲೆಯನ್ನು ಮೀರಿ ವಿಶ್ವವ್ಯಾಪಿಯಾದ ಸತ್ಯವನ್ನು ಪಸರಿಸುವಂತಾಗಬೇಕು. ಇಲ್ಲವಾದರೆ ಸುಮ್ಮನಿರುವುದು ಲೇಸು.



ಪ್ರಸ್ತುತತೆ -  ಸಮಾಜದಲ್ಲಿ ಬುರ್ಖಾ, ಹಿಜಾಬು, ತಲಾಖು, ಹಲೀಮು ಇತ್ಯಾದಿಗಳಿಂದ ಧೃವೀಕರಣವನ್ನು ಆರಂಭಿಸಿದ ಆರೋಪವನ್ನು ಪ್ರಸ್ತುತ ಸರ್ಕಾರಗಳು ಎದುರಿಸುತ್ತಿವೆ. ಜೊತೆಗೆ ಬಲಪಂಥೀಯ ವಿಚಾರಗಳು ಸಮಾಜದ ವೈಚಾರಿಕರನ್ನೂ ದಾರಿತಪ್ಪಿಸುವ ಮಟ್ಟಿಗೆ ``ಛಾಲೆಂಜಿಂಗ್’ ಆಗಿವೆ. ಈ ಹಂತದಲ್ಲಿ ಭಗವದ್ಗೀತೆ, ಧ್ಯಾನದಂತಹ ಪ್ರಯೋಗಗಳ ಅವಶ್ಯಕತೆ ಇದೆಯಾ? ಇದ್ದರೆ ಇಲ್ಲಿಯವರೆಗೆ ಭಗವದ್ಗೀತೆ ಓದಿದ, ಯೋಗಾಭ್ಯಾಸ ಮಾಡಿದ ಮಕ್ಕಳು (ಈಗವರು ಸುಮಾರು 30-40ರ ವಯಸ್ಸಿನಲ್ಲಿದ್ದಾರೆ) ಹೇಗೆ ಅವುಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನುವ ಸಮೀಕ್ಷೆ ನಡೆಯಲಿ. ಆ ನಂತರ ಈ ವಿಷಯದ ಪ್ರಸ್ತಾಪವಾಗಲಿ.

ಶಾಲಾ ಬ್ಯಾಗಿನಲ್ಲಿ ಕಾಂಡೋಮ್ – ಆಪ್ತಸಮಾಲೋಚನೆ ಯಾರಿಗೆ ಬೇಕು?

 ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಹತ್ತನೆ ತರಗತಿಯ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆಯಾಗಿದೆ. ಇದು ನಿನ್ನೆನ ಸುದ್ದಿ. ಸಾಮಾಜಿಕ ಮಾಧ್ಯಮದಲ್ಲೆಂತೂ ಇದರ ಬಗ್ಗೆ ಚರ್ಚೆಯೊ ಚರ್ಚೆ. ಇದು ಅನಿರೀಕ್ಷಿತವೇ? ಇದು ಪ್ರಶ್ನೆ.

25 ವರ್ಷಗಳ ಹಿಂದೆ ಹೀಗಿತ್ತಾ? ಯೋಚನೆ ಮಾಡಿದೆ. ಖಂಡಿತ ಇತ್ತು. ಆದರೆ ಹೊರಗೆ ಬರುತ್ತಿರಲಿಲ್ಲ. ನಾನು ಚಿಕ್ಕವಳಿದ್ದಾಗ ನನ್ನದೇ ವಯಸ್ಸಿನ ಕೆಲವು ಹೆಣ್ಣುಮಕ್ಕಳಿದ್ದರು. ಅವರ ಲೈಂಗಿಕ  ಜ್ಞಾನ ಎಷ್ಟಿತ್ತು ಎಂದರೆ ಇವತ್ತು ಕುಳಿತು ಯೋಚಿಸುವಾಗ ಅವರ ಬಗ್ಗೆ ಅಬ್ಬಾ! ಎನಿಸುತ್ತದೆ.. ಒಂದನೇ ತರಗತಿಯಲ್ಲಿದ್ದಾಗ ಒಬ್ಬ ಸಹಪಾಠಿ ಹೇಳುತ್ತಿದ್ದುದು ನೆನಪಿದೆ. ಮಕ್ಕಳಾಗುವ ಸಂಪೂರ್ಣ ಪ್ರಕ್ರಿಯೆ ಹೇಳಿದ್ದಳು. ನನಗೆ ಎಷ್ಟು ಭಯವಾಗಿತ್ತೆಂದರೆ ಆ ಹುಡುಗಿಯ ಬಗ್ಗೆ ಯೋಚಿಸಲೂ ಎಷ್ಟೋ ವರ್ಷ ಭಯ ಪಟ್ಟುಕೊಂಡಿದ್ದೆ. ಇನ್ನು ದೊಡ್ಡವಳಾಗ್ತಾ ಆಗ್ತಾ ಆಗ್ತಾ ಅಂತಹ ಹಲವಾರು ಹುಡುಗಿಯರ ಒಡನಾಟ ಸಿಕ್ಕಿತ್ತು. 7 – 10ನೇ ತರಗತಿ ಕೇವಲ ಪ್ರೇಮಪತ್ರಕ್ಕೆ, ಅದಕ್ಕೆ ಸಂಬಂಧಪಟ್ಟ ಪ್ರಯೋಗಕ್ಕೆ ಮಾತ್ರವಲ್ಲ ಲೈಂಗಿಕತೆಗೆ ಸಂಬಂಧಪಟ್ಟೂ ಪ್ರಯೋಗಗಳು ನಡೆಯುತ್ತಿದ್ದವು. ಕೆಲವು ಶಿಕ್ಷಕರ ಹೆಸರು, ಅಕ್ಕಂದಿರ ಹೆಸರೂ ಕೇಳಿಬರುತ್ತಿತ್ತು. ನನಗಿನ್ನೂ ಹದಿನೆಂಟು ತುಂಬದೇ ಇರುವಾಗ ಅಂತಹ ಒಬ್ಬ ಅಂಕಲ್ಲು ಬಂದು ನಿನ್ನ ಅಕ್ಕ ಎಷ್ಟು ಕೊಪರೇಟ್ ಮಾಡುತ್ತಿದ್ದಳು, ನೀನ್ಯಾಕೆ ಹೀಗೆ ಎಂದು ಕೇಳಿದ್ದರು. ಇವೆಲ್ಲ ಅವತ್ತಿನ ನನ್ನ ಮನೋಭೂಮಿಕೆಯಲ್ಲಿ ಭಯಂಕರ ಬಿರುಗಾಳಿಯೆಬ್ಬಿಸಿದ್ದವು.

ಅವತ್ತು ಗರ್ಭನಿರೋಧಕವಾಗಿ ಏನು ಬಳಸುತ್ತಿದ್ದರೋ ಗೊತ್ತಿಲ್ಲ, ನಾನೂ ಕೇಳುವಷ್ಟು ದೊಡ್ಡವಳಾಗಿರಲಿಲ್ಲ. ಅನುಭವವಿಲ್ಲದ, ನಾಚಿಕೆ, ಅಂಜಿಕೆಗಳಿಂದ ಸತ್ತುಹೋಗುವಷ್ಟು ಮುದುರಿಕೊಳ್ಳುತ್ತಿದ್ದವಳು ಆ ಬಗ್ಗೆ ಯೋಚಿಸಿಯೂ ಇರಲಿಲ್ಲ. ಇವತ್ತು ಈ ವಿಷಯ ನಾನು ಅಂದಿಗೆ ಹೋಗಿ ನಿಲ್ಲುವಂತೆ ಮಾಡಿದೆ. ಈಗ ಅನಿಸುತ್ತದೆ. ಬಹುಶಃ ಅವರು ವಯಸ್ಸಿನಲ್ಲಿ12- 16ರ ಒಳಗಿದ್ದರೂ ಲೈಂಗಿಕವಾಗಿ ಆ ವಯಸ್ಸನ್ನು ಮೀರಿದ ಪ್ರಬುದ್ಧರಾಗಿದ್ದರು. ಈ ಲೈಂಗಿಕ ಪ್ರಬುದ್ಧತೆ ಕೇವಲ ಅನುಭವದಿಂದ ಮಾತ್ರವಲ್ಲ, ಜೈವಿಕವಾಗಿಯೂ ಬರುತ್ತದೆಯಂತೆ. ಉದಾಹರಣೆಗೆ 18 ವರ್ಷ ದಾಟಿದ ಮೇಲೆಯೇ ಹೆಣ್ಣಿಗೆ ಮದುವೆ ಎಂದು ಮಾಡಿರುವ ಸಂಗತಿ. ಜೈವಿಕವಾಗಿ ಆಕೆ 12-16 ವರ್ಷಗಳ ಒಳಗೇ ಮಕ್ಕಳಾಗುವ ಹಂತಕ್ಕೆ ದೇಹ ದಾಟಿದ್ದರೂ ಮನಸ್ಸಿನ್ನೂ ಮಾಗಿರುವುದಿಲ್ಲ. ಕೆಲವು ಹೆಣ್ಣುಮಕ್ಕಳಿಗೆ `ಆ ಮನಸ್ಸು’ ಮಾಗಿರುತ್ತದೆ. ಹಾಗಾಗಿ 10ನೇ ತರಗತಿಯ ಹೊತ್ತಿಗೇ ಕೆಲವು ಹೆಣ್ಣುಮಕ್ಕಳು ಒಬ್ಬರು/ಒಬ್ಬರಿಗಿಂತ ಹೆಚ್ಚು ಬಾಯ್ ಫ್ರೆಂಡ್ ಗಳನ್ನು ನಿಭಾಯಿಸಬಲ್ಲವರಾಗಿರುತ್ತಾರೆ. ಈಗ ಮಾಧ್ಯಮದಲ್ಲಿ ಎಲ್ಲವೂ ಮುಕ್ತವಾಗಿರಬೇಕಾದರೆ ಈ ಬಗ್ಗೆ ಅರಿವು ಮತ್ತು ಮಾಗುವಿಕೆ ಬೇಗನೆ ಘಟಿಸಬಹುದು. ಅದಕ್ಕೆ ತಕ್ಕಂತೆ ಆ ಹುಡುಗಿ ಸುರಕ್ಷತೆಗಾಗಿ ಕಾಂಡೋಮ್ ಇಟ್ಟುಕೊಂಡಿದ್ದಾಳೆ.

 ಇದಕ್ಕಾಗಿ ನಾವು ಸಮಾಧಾನಪಟ್ಟುಕೊಳ್ಲಬೇಕು. ಗ್ರಾಮೀಣ ಭಾಗದಲ್ಲಿ ಹದಿಹರೆಯದ ಹೆಣ್ಣುಮಕ್ಕಳು ಸ್ವಂತ ಸಂಬಂಧಿಗಳಿಂದಲೇ ಅತ್ಯಾಚಾರಕ್ಕೋ, ಬಲವಂತಕ್ಕೋ, ಆಮಿಷಕ್ಕೋ ಬಲಿಯಾಗಿ ಗರ್ಭಿಣಿಯರಾಗುವ ಸುದ್ದಿ ದಿನ ಬಂದೇ ಬರುತ್ತದೆ. ಅವರಿಗಿಲ್ಲದ ಎಕ್ಸಪೋಷರ್ ಈ ಪೇಟೆಯ ಹುಡುಗಿಗೆ ಸಿಕ್ಕು ಅವಳ ಬಾಲ್ಯ ಅನಾವಶ್ಯಕ ತಲೆನೋವುಗಳಿಂದ ಇನ್ನಷ್ಟು ನರಳುವುದು ತಪ್ಪಿತಲ್ಲ. ಬಹಳಷ್ಟು ಹೆಣ್ಣುಮಕ್ಕಳು ಪ್ರತಿಭಟನೆಗಿಂತ ಒಪ್ಪಿಕೊಳ್ಳುವಿಕೆಯನ್ನು ಆಯ್ದುಕೊಳ್ಳುತ್ತಾರೆ. ಇದು ಹೆಚ್ಚು ಸುರಕ್ಷಿತ ಮತ್ತು ಕ್ಷೇಮ ಎಂದೂ ಭಾವಿಸುತ್ತಾರೆ. ಅವುಗಳಲ್ಲೊಂದು ಈ ಕಾಂಡೋಮ್ ವ್ಯವಹಾರ. ಈ ನಿಟ್ಟಿನಲ್ಲೂ ಯೋಚಿಸಬೇಕಾಗಿದೆ.

ಅದರ ಬದಲು ಆಪ್ತಸಮಾಲೊಚನೆ ಎಂದು ಕರೆದುಕೊಂಡು ಹೋದರೆ ಆ ಹುಡುಗಿ ಮನಸ್ಸಿನಲ್ಲೇ ನಕ್ಕಿರುತ್ತಾಳೆ. ಅಲ್ಲ, ನನ್ನ ಸುರಕ್ಷತೆಗಾಗಿ ನಾನು ಇದನ್ನು ಇಟ್ಟುಕೊಂಡಿದ್ದೇನೆಂದರೆ ಇದರ ಸಾಧಕ ಬಾಧಕಗಳು ನನಗಲ್ಲದೆ ಬೇರೆ ಯಾರಿಗೆ ತಿಳಿದೀತು ಎಂದು. ಈ ಆಪ್ತಸಮಾಲೊಚಕರೂ ಸ್ವಲ್ಪ ಪ್ರಬುದ್ಧರಾಗಿದ್ದರೆ ಸರಿ. ಇಲ್ಲದೇ ಅವಳು ಬಂದು ಕುಳಿತ ಕೂಡಲೆ ಮಗು ನೀನಿನ್ನೂ ಚಿಕ್ಕವಳು, ಹೀಗೆಲ್ಲ ಮಾಡಬಾರದು. ಅದೆಲ್ಲ ಮದುವೆ ಅಂತಾದಮೇಲೆ ಎಂದು ಮನೆಯಲ್ಲಿ ಅಜ್ಜ, ಅಜ್ಜಿ ಹೇಳುವ ಹಾಗೆ ಹೇಳಲು ಶುರು ಮಾಡಿದರೆ ಅಲ್ಲಿಗೆ ಕತೆ ಮುಗಿಯಿತು. ಆ ಹುಡುಗಿ ಮನಸ್ಸಿನಲ್ಲಿ ಇನ್ನಷ್ಟು ನಕ್ಕು, 10 ವರ್ಷದ ಮೇಲೆ ಸಿಗಿ ನೀವು, ನಾನು ನಿಮಗೆ ಆಪ್ತಸಮಾಲೋಚನೆ ಮಾಡುತ್ತೇನೆ ಎಂದಿರುತ್ತಾಳೆ. ಯಾಕೆಂದರೆ ಇವತ್ತಿನ ಮಕ್ಕಳು, ಅವರ ಮನಸ್ಸು ಬಹಳ ಮಾಗಿರುತ್ತವೆ. ಸಾಧಕ, ಬಾಧಕಗಳನ್ನು ಯೋಚಿಸಿಯೇ ಎಲ್ಲವನ್ನೂ ಮಾಡುತ್ತಾರೆ. ನಮಗೆ ಪೋಷಕರಿಗೆ ಭರವಸೆ ಇರಬೇಕು. ಅವರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯುವ ಸಲುಗೆ ಇರಬೇಕು. ತಪ್ಪು ಎನಿಸಿದಾಗ ತಿದ್ದಿ ಸರಿದಾರಿಗೆ ತರುವ ಪ್ರೀತಿ ಇರಬೇಕು. ಏನನ್ನಾದರೂ ಮುಚ್ಚಿಡದೆ ಎಲ್ಲವನ್ನೂ ಹೇಳಿಕೊಳ್ಳಬಹುದಾದ ಭರವಸೆಯನ್ನು ಮಕ್ಕಳಲ್ಲಿ ಹುಟ್ಟಿಸುವ ಹಾಗೆ ಸಂಬಂಧ ಇರಬೇಕು.

ಈಗ ಆಪ್ತಸಮಾಲೊಚನೆ ಬೇಕಿರುವುದು ಮಕ್ಕಳಿಗಲ್ಲ, ಪಾಲಕರಿಗೆ, ಶಿಕ್ಷಕರಿಗೆ ಮತ್ತು ಈ ವಿಷಯವನ್ನು ದೊಡ್ಡದಾಗಿ ಮಾಡಿ ಆ ಶಾಲೆ, ಆ ಹುಡುಗಿಯನ್ನು ಬೊಟ್ಟು ಮಾಡುತ್ತ ಪ್ರಚಾರ ಪಡೆಯುವ ಮಾಧ್ಯಮ ಮಿತ್ರರಿಗೆ.

 

ಕನ್ನಡವನ್ನು ಕೊಲ್ಲುವ ಕೆಲಸ!












ಹೌದು, ನೀವು ಸರಿಯಾಗಿ ಓದಿದ್ದೀರಿ. ಈ ಕೆಲಸವನ್ನು ಮಾಡುತ್ತಿರುವುದು ಬೇರೆ ಯಾರೂ ಅಲ್ಲ. ಸ್ವತಃ ರಾಜ್ಯ ಶಿಕ್ಷಣ ಇಲಾಖೆ. ಹೇಗೆ? ನೀವು ಈ ವರ್ಷ ಹೊಸದಾಗಿ ಪರಿಷ್ಕೃತಗೊಂಡ 1ನೇ ತರಗತಿಯ ಕನ್ನಡ ಪುಸ್ತಕಗಳನ್ನು ತೆಗೆದುನೋಡಿ. ಇಡೀ ಪುಸ್ತಕದ ಸೃಷ್ಟಿಯೇ ಕನ್ನಡವನ್ನು ಕೊಲೆ ಮಾಡಲೆಂದೇ  ಆಗಿದೆ ಎನ್ನುವಂತೆ ಭಾಸವಾಗುತ್ತದೆ. ಕನ್ನಡದ ಕಾಗುಣಿತ ಕಲಿಸುವ ಮೊದಲೇ ವಂದನೆ ಪದ್ಯ ಶುರುವಾಗುತ್ತದೆ. ಮಗುವಿನ ಕಲ್ಪನೆ ಅಪ್ಪ, ಅಮ್ಮನಿಂದ ಮುಂದೆ ಹೋಗುವ ಮೊದಲೇ ರೈತ, ಯೋಧ, ವೈದ್ಯೆ ಎಲ್ಲಾ ಬರುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ನೀವು ಕೇಳಬಹುದು!

ಅಂತೆಯೇ ಕತೆಗಳು, ಹಾಡುಗಳು, ಶಬ್ಧಗಳು ಎಲ್ಲವೂ ಆಗ ತಾನೆ ಶಾಲೆಗೆ ಕಾಲಿಟ್ಟ ಮಗುವಿನ ಎದುರು ಒಮ್ಮೆಲೆ ಪ್ರತ್ಯಕ್ಷವಾಗುತ್ತವೆ. ಅಷ್ಟು ದೊಡ್ಡ ಹಾಡುಗಳು, ಕತೆಗಳನ್ನು ಹೇಳಲು ಕಲಿಯುವುದಷ್ಟೇ ಅಲ್ಲ, ಅದರಲ್ಲಿ ಬರುವ ಶಬ್ಧಗಳು, ಅರ್ಥಗಳು, ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂದು ಹೇಳುವುದು ಮತ್ತು ಬರೆಯುವುದೂ ಸಹ ಸೇರಿವೆ! ಎಂದರೆ ಇದು ಯಾವ ವಯಸ್ಸಿನ ಮಕ್ಕಳ ಪುಸ್ತಕ ಎಂಬ ಗೊಂದಲಕ್ಕೆ ಬೀಳಿಸುತ್ತದೆ. ಇನ್ನು ಕಾಗುಣಿತ ಕಲಿಸುವಿಕೆಯೂ ದೊಡ್ಡ ಗೊಂದಲ. ಮಗುವಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುವ ಯಾವುದೇ ತಂತ್ರಗಳು ಇಲ್ಲಿಲ್ಲ.

ನೆನಪಿಟ್ಟುಕೊಳ್ಳಲು ಸಹಾಯವಾಗುವ ಸೀಕ್ವೆನ್ಸಿಂಗ್ , ಲಿಂಕಿಂಗ್ ವಿಧಾನಗಳು ಈ ಮೊದಲು ಇದ್ದವು. ಉದಾಹರಣೆಗೆ ಅ, ಆ, ಇ, ಈ ಈ ರೀತಿ. ಈಗ ಅ ಒಮ್ಮೆ ಬಂದರೆ ಆ ಇನ್ನೆಲ್ಲೊ ಬರುತ್ತದೆ. ಯಾವತ್ತೋ ಕಲಿತಿರುವ ಅ, ಆ ಗಳನ್ನು ಈ ಒಂದನೆ ತರಗತಿಯ ಮಗು ಗುರುತಿಸಿ ಹೇಳಬೇಕು ಎನ್ನುವ ಕಲ್ಪನೆ ಈ ಪಠ್ಯಕ್ರಮ ಸಿದ್ಧಪಡಿಸಿರುವವರ ಯೋಚನೆಯಂತಿದೆ. ಮಗು ಅದಾಗಲೇ ಕನ್ನಡ ಅಕ್ಷರಗಳನ್ನು ಕಲಿತು ಬಂದಿರುತ್ತದೆ ಎಂಬ ಗ್ರಹಿಕೆಯಲ್ಲಿ ಈ ಪಠ್ಯ ಸಿದ್ಧಪಡಿಸಿರುವ ಹಾಗೆ ತೋರುತ್ತದೆ. ಆದರೆ ಮಗು ಕನ್ನಡದ ಅ, ಆ , ಇ, ಈ ಸಹ ಕಲಿತಿರಲಿಕ್ಕಿಲ್ಲ ಎನ್ನುವುದಕ್ಕೆ ಸಾಕಷ್ಟು ಸಾಕ್ಷಗಳು ದೊರೆಯುತ್ತವೆ. ಅವರ ಗಮನಕ್ಕೆ ಬಂದಿಲ್ಲವೆಂತಲೇ ಹೇಳಬೇಕಾದ ವಿಷಯಗಳಿವೆ.

1.      ವಿಶ್ವಸಂಸ್ಥೆ ಮತ್ತು ಭಾರತದ ಮಕ್ಕಳ ತಜ್ಞರು 6 ವರ್ಷಗಳೊಳಗೆ ಮಗುವಿನ ಗ್ರಿಪ್ಪಿಂಗ್ ಸರಿಯಾಗಿ ಬಂದಿರುವುದಿಲ್ಲ. ಅದಕ್ಕಾಗಿ ನಲಿ, ಕಲಿ  ವಿಧಾನದಲ್ಲಿ ನಿಧಾನವಾಗಿ ಬರೆಸುವ ಪ್ರಕ್ರಿಯೆ ಶುರುವಾಗಬೇಕು ಎನ್ನುತ್ತಾರೆ. ಶಿಕ್ಷಣ ತಜ್ಞೆ ಮರಿಯಾ ಮಾಂಟೆಸರಿ 6 ವರ್ಷಗಳೊಳಗಿನ ಮಗುವಿಗೆ ಬರೆಸುವುದೇ ದೊಡ್ಡ ತಪ್ಪು ಎನ್ನುತ್ತಾರೆ. ಆದರೆ ಇಲ್ಲಿ 6 ವರ್ಷದ ಮಗು ಅದಾಗಲೇ ಕನ್ನಡದ ಅ, ಆ , ಇ, ಈ ಕಲಿತಿರಬೇಕು ಅಥವಾ ಕಲಿತಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಭಾವಿಸಲಾಗಿದೆ.

2.     ಈಗ 1ನೇ ತರಗತಿಗೆ ಹಾಜರಾದ ಮಕ್ಕಳಲ್ಲಿ 7-8 ವರ್ಷಗಳ ಮಕ್ಕಳೂ ಇದ್ದಾರೆ. ಕೊರೊನ ಕಾಲದಲ್ಲಿ ಮನೆಯಲ್ಲೇ ಉಳಿದ ಮಕ್ಕಳು ಈಗ ಒಂದನೇ ತರಗತಿಗೆ ದಾಖಲಾಗಿದ್ದಾರೆ. ಅವರೊಂದಿಗೆ 5-6 ವರ್ಷಗಳ ಮಗುವೂ ಸೇರಿಕೊಂಡಿದೆ. ಇಲ್ಲಿ 7-8ನೇ ವಯಸ್ಸಿನಲ್ಲಿರುವ ಎರಡು, ಮೂರನೇ ತರಗತಿಯಲ್ಲಿರಬಹುದಾದ ಮಗು ಕೆಲವೊಂದು ಪಾಠಗಳನ್ನು ಬೇಗನೇ , ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತದೆ. 5-6ನೇ ವಯಸ್ಸಿನ ಮಗು ಹಿಂದುಳಿಯುತ್ತದೆ. ಇದು ಕಲಿಸುವ ವಿಷಯದಲ್ಲಿ ತಾರತಮ್ಯವನ್ನು ಸೃಷ್ಟಿಸುತ್ತಿದೆ.

3.     ಅದೇ ಸಿಬಿಎಸ್ ಸಿ ಪಠ್ಯಕ್ರಮದ ಹಿಂದಿ ಪಾಠಗಳನ್ನು ನೋಡಿದರೆ ಎಲ್ಲೂ ಹಿಂದಿಯನ್ನು ಮಗು ಅದಾಗಲೇ ಕಲಿತು ಬಂದಿದೆ ಎಂದು ಪರಿಗಣಿಸುವುದಿಲ್ಲ. ಈಗಷ್ಟೇ ವ್ಯವಸ್ಥಿತವಾಗಿ, ನೆನಪಿಟ್ಟುಕೊಳ್ಳಲು ಸುಲಭವಾಗುವ ಹಾಗೆ ನಿಧಾನವಾಗಿ ಕಲಿಸಲಾಗುತ್ತದೆ. ಜನಪ್ರಿಯ ಆಂಗ್ಲಭಾಷೆಯನ್ನೂ ಸಹ ವಾಕ್ಯಗಳನ್ನು ಬರೆಸುವ ಹಂತಕ್ಕೆ ಕೊಂಡೊಯ್ಯುವುದಿಲ್ಲ. ಮೊದಲಿಗೆ ಅಕ್ಷರಗಳು, ನಂತರ ಆ ಅಕ್ಷರಗಳ ವ್ಯತ್ಯಾಸಗಳು (ಸ್ವರ ಮತ್ತು ವ್ಯಂಜನ), ಅವು ಶಬ್ಧಗಳಾಗುವ ಬಗೆ ಫೋನಿಕ್ಸ್ ಮತ್ತು ವರ್ಲ್ಡ್ ಫ್ಯಾಮಿಲಿ ಹೀಗೆ ಕಲಿಕೆ ವ್ಯವಸ್ಥಿತವಾಗಿದೆ.

4.    ಪ್ಲೆವೇ ವಿಧಾನದಲ್ಲಿರಲಿ, ಮಾಂಟೆಸರಿಯಲ್ಲಿರಲಿ ಕನ್ನಡದ ಕಾಗುಣಿತ ಮನೆಯಲ್ಲಿ ಹೇಳಿಕೊಡದ ಹೊರತು 3-6 ವರ್ಷಗಳ ಒಳಗಿನ ಮಗು ಕಲಿಯತಿರುವುದು ಬಹಳ ಅಪರೂಪ. ಇನ್ನೂ ಆಡಿಕೊಂಡಿರುವ ವಯಸ್ಸಿನಲ್ಲಿ ಅದಾಗಲೇ ಸಾಕಷ್ಟು ಮಾಹಿತಿಗಳು, ಹಾಡುಗಳು ಎಲ್ಲವನ್ನೂ ಆಂಗ್ಲಭಾಷೆಯಲ್ಲಿ ಕಲಿತಿರುತ್ತದೆ. ಮನೆಯಲ್ಲಿ ದೊಡ್ಡವರು ಹೇಳಿಕೊಟ್ಟರೂ ಅದು ಹೊರಗಿನ ಈ ಕಲಿಕೆಯ ಜೊತೆಗೆ ಮಗುವಿಗೆ ಭಾರವೆ. ಇನ್ನು ಅಂಗನವಾಡಿಯಲ್ಲಿ ಕಲಿತ ಮಗು ಎಂತಿಟ್ಟುಕೊಂಡರೂ ಕನ್ನಡ ಶಾಲೆಗೆ ದಾಖಲಾಗುವಾಗ ಕನ್ನಡ ಕಾಗುಣಿತ ಕಲಿತಿರುವುದೂ ಕಷ್ಟ. ಕನ್ನಡ ಶಾಲೆಗೆ ಸೇರುತ್ತದೆಯೇ ಹೊರತು ಸಿಬಿಎಸ್ ಸಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ದಾಖಲಾಗುವುದು ವಿರಳಾತಿವಿರಳ. ಪಠ್ಯಕ್ರಮ ಸಿದ್ಧಪಡಿಸಿದವರ ಈ ಗ್ರಹಿಕೆಯೂ ಇಲ್ಲಿ ಸೋಲುತ್ತದೆ.

5.     ಅತಿಯಾದ ಸಂಸ್ಕೃತ ಶಬ್ಧಗಳು ಇದರಲ್ಲಿವೆ. ಕನ್ನಡ ಭಾಷೆಯ ಶಬ್ಧಗಳನ್ನು ತೆಗೆದರೆ ಶೇ.10-20 ರಷ್ಟು ಮಾತ್ರ ಕಾಣಸಿಗುತ್ತದೆ. ದಿನಬಳಕೆಯ ಶಬ್ಧಗಳು ಇಲ್ಲವೇ ಇಲ್ಲ ಎನ್ನಬಹುದು. ಇದೂ ಸಹ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕೆಲಸವೇ ಆಗಿದೆ.

ಪರಿಣಾಮ ಏನು?

ಭಾಷೆಯ ಮೇಲೆ

·         ಮಗು ಕನ್ನಡವೆಂದರೆ ಕಷ್ಟದ ವಿಷಯ ಎಂದು ಭಾವಿಸುತ್ತದೆ. ವರ್ಷ ಕೊನೆಗೊಳ್ಳುವ ಹೊತ್ತಿಗೆ ಕನ್ನಡವನ್ನು ದ್ವೇಷಿಸುತ್ತದೆ.

·         ವಿದ್ಯಾರ್ಥಿಗಳ ಮಧ್ಯೆ ಕಲಿಕೆಯ ತಾರತಮ್ಯ ಹೆಚ್ಚಾಗುತ್ತದೆ.

·         ಮಗುವಿನ ಮಾನಸಿಕ ಒತ್ತಡ ಹೆಚ್ಚಾಗುತ್ತದೆ,

·         ಕನ್ನಡವೂ ಸೇರಿದಂತೆ ಉಳಿದ ವಿಷಯಗಳ ಬರವಣಿಗೆಯಲ್ಲೂ ಹಿಂದೆ ಬೀಳುತ್ತದೆ.

·         ಮಗು ಬೆಳೆದ ಹಾಗೆಲ್ಲ ಸುಲಭವಾಗಿ, ಸರಳವಾಗಿ ಕಲಿಸಿದ ಆಂಗ್ಲ ಮತ್ತು ಹಿಂದಿ ಭಾಷೆಗಳನ್ನು ಹೆಚ್ಚು ಇಷ್ಟಪಡುತ್ತ, ಅರಳುವ ಮೊದಲೇ ಬಿರಿದ ಹೂವಿನ ಹಾಗೆ ಕನ್ನಡ ಭಾಷೆಯ ಕಲಿಕೆಯಲ್ಲಿ ನಲುಗುತ್ತದೆ. ಕನ್ನಡವನ್ನು ಸುಪ್ತವಾಗಿ ದ್ವೇಷಿಸುತ್ತದೆ. ಅದರ ಫಲವನ್ನು ಈಗಾಗಲೇ 50% ರಷ್ಟು ಯುವಜನಾಂಗದಲ್ಲಿ ಕಾಣುತ್ತಿದ್ದೇವೆ. ಆ ಅಂಶ 100% ರಷ್ಟಾಗಲು ಏನೇನು ಮಾಡಬೇಕೊ ಅದೆಲ್ಲವನ್ನೂ ಈ ಪಠ್ಯಕ್ರಮ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಮಗುವಿನ ಮಾನಸಿಕ ಆರೋಗ್ಯದ ಮೇಲೆ – ಆರು ವರ್ಷದ ಮಗು ಈಗ ಕೇವಲ ಕಾಗುಣಿತ, ಮಗ್ಗಿ ಕಲಿಯುವುದಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ ಮತ್ತು ಕಂಪ್ಯೂಟರ್ ಇಷ್ಟನ್ನು ಕಲಿಯುತ್ತಿರುತ್ತದೆ. ಕನ್ನಡವನ್ನು ಒಂದೇ ವರುಷದಲ್ಲಿ ಹೇಳಿಕೊಡಲು ಹೊರಟಾಗ ಮಗುವಿನ ಮೇಲೆ ಅದಾಗಲೇ ಇರುವ ಒತ್ತಡಕ್ಕೆ ಇನ್ನಷ್ಟು ಸೇರಿಸಿದಂತಾಗುತ್ತದೆ. ಒತ್ತಡ ಹೆಚ್ಚಾಗುವುದರ ಪರಿಣಾಮ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ, ಶಾಲೆಗೆ ಹೋಗಲು ನಿರಾಕರಿಸುತ್ತದೆ. ತನ್ನ ಒತ್ತಡ, ಆತಂಕಗಳನ್ನು ಮೀರಲು ಮೊಬೈಲ್ ನೋಡುವುದು, ದುಶ್ಚಟಗಳಿಗೆ  ಬೀಳುವುದು ಮತ್ತಿತರ ಅಡ್ಡದಾರಿಯನ್ನು ಹಿಡಿಯುತ್ತದೆ.  ದೈಹಿಕ ಆರೋಗ್ಯದ ಮೇಲೆ – ಆಗಿನ್ನೂ ಪೆನ್ಸಿಲ್ ಹಿಡಿಯಲು ಕಲಿತ ಮಗು ಅಗತ್ಯಕ್ಕಿಂತ ಹೆಚ್ಚು ಬರೆದಾಗ ಕೈನೋವಿನಿಂದ ನರಳುತ್ತದೆ. ಇನ್ನೂ ಬಲಿತಿಲ್ಲದ ಕೈಯ ನರಗಳ ಮೇಲೆ ಪರಿಣಾಮವಾಗುತ್ತದೆ. ಒತ್ತಡದಿಂದಾಗಿ ಮನೋದೈಹಿಕ ಸಮಸ್ಯೆಗಳಾದ ಜ್ವರ, ಭೇದಿ, ನೆಗಡಿ, ತಲೆನೋವಿನಂತಹ ಸಮಸ್ಯೆಗಳನ್ನು ಹೊಂದುತ್ತದೆ.

ನೈತಿಕ ಮೌಲ್ಯದ ಮೇಲೆ ಪರಿಣಾಮ – ಈ ಮಕ್ಕಳ ಒದ್ದಾಟ ನೋಡಲಾಗದೆ, ಮಕ್ಕಳು ಬರೆಯುವುದನ್ನು ನಿರಾಕರಿಸಿದಾಗ, ಪಾಲಕರು (ವಿಶೇಷವಾಗಿ ತಾಯಿ) ಖುದ್ದು ಬರೆದುಕೊಡುತ್ತಾರೆ. ಇದರಿಂದ ಮಕ್ಕಳು ಒಂದನೆ ತರಗತಿಯಿಂದಲೇ ಮೋಸ ಮಾಡುವುದನ್ನು ಪಾಲಕರಿಂದಲೇ ಕಲಿಯುತ್ತವೆ. ಕೇಳಿದಾಗ ಇಲ್ಲ, ನಾನೇ ಬರೆದಿದ್ದೇನೆ ಎಂದು ಸುಳ್ಳು ಹೇಳುವವರೂ ಇದ್ದಾರೆ. ಬೇರೆ ಮಕ್ಕಳಿಂದ ಬರೆಸಿಕೊಳ್ಳುವ , ಬರೆಸಿಕೊಳ್ಳಲು ಅವರು ಹೇಳಿದ್ದನ್ನು ಮಾಡುತ್ತಾರೆ. ಆ ಮೂಲಕ ಲಂಚ, ಲಾಬಿ ಎಲ್ಲಾ ಬೇಡದ ಗುಣಗಳನ್ನು ಕಲಿಯುತ್ತಿದ್ದಾರೆ.

ಶಿಕ್ಷಣದ ಮೇಲೆ – ಉರು ಹೊಡೆಯುವುದು/ ಬಾಯಿಪಾಠ ಮಾಡುವುದು ಕಲಿಯುತ್ತಾರೆ. ವಿಷಯಗಳ ಅಧ್ಯಯನಶೀಲ ಮನೋಭಾವನೆಯನ್ನು ಈ ಹಂತದಲ್ಲಿಯೇ ಕೊಲ್ಲಲಾಗುತ್ತಿದೆ. ಒಂದೇ ವಿಷಯವನ್ನು ಮರು ವರ್ಷಗಳಲ್ಲಿಯೂ ಕಲಿತು ಕಲಿತು ಬೇಸರವಾಗಿ ಶಾಲೆ, ಕಾಲೇಜುಗಳೆಂದರೆ ಓಡಿಹೋಗುವಂತಾಗಿದೆ.

 

 


ಪ್ರೇಕ್ಷಕ ವರ್ಗವು ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆಯೆ?

 ಕಾಶ್ಮೀರ್ ಪೈಲ್ಸ್ ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ಕೆಟ್ಟಚಿತ್ರ ಮತ್ತು ಪ್ರಚಾರದ ಗಿಮಿಕ್ ಎಂದು ಹೀಗಳೆಯಲ್ಪಟ್ಟಿದೆ. ಯಥಾಪ್ರಕಾರ ಸಮಾಜದ ಒಂದು ಬಣ ನಿರ್ಣಾಯಕರಲ್ಲಿ ಒಬ್ಬ ತನ್ನದೇ ದೇಶದ ಮಾನ ತೆಗೆಯಲು ಹಿಂದು ಮುಂದು ನೋಡದ ವ್ಯಕ್ತಿ. ಆ ವ್ಯಕ್ತಿಯ ಮಾತನ್ನು ಯಾಕೆ ಅಷ್ಟು ಮಹತ್ವದ್ದಾಗಬೇಕು. ಅದೊಂದು ಉತ್ತಮ ಚಿತ್ರವಾಗಿರದಿದ್ದರೆ ಜನರು ಅದನ್ನು ಗೆಲ್ಲಿಸುತ್ತಿದ್ದರೆ? ಎಂದು ಪ್ರತಿಪಾದಿಸುತ್ತಿದ್ದಾರೆ. ಇನ್ನೊಂದು ಬಣ ಭಾರತದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿರ್ಣಾಯಕರನ್ನು ವಿದೇಶಗಳಿಂದ ಆಮಂತ್ರಿಸಲಾಗುತ್ತದೆ. ಖುದ್ದು ಸರ್ಕಾರವೇ ಇವರನ್ನು ನಿಯುಕ್ತಿಗೊಳಿಸುತ್ತದೆ. ಅವರಲ್ಲಿ ಯಾರೊಬ್ಬರು ಇಂತಹ ಚಕಾರಗಳನ್ನೆತ್ತಿದರೆ ತಪ್ಪೇನು? ಸತ್ಯವನ್ನು ಸತ್ಯವೆಂದು ಹೇಳಿದರೆ ಯಾಕೆ ಅಲ್ಲಗಳೆಯಬೇಕು? ಬೊಬ್ಬೆಹೊಡೆಯಬೇಕು? ಈ ಚಲನಚಿತ್ರವೊಂದು ಪಕ್ಷವೊಂದರ ಪ್ರಾಪಗೆಂಡ ಎನ್ನುವುದು ಸಾಬೀತಾಗಿದೆ. ಖುದ್ದು ಪ್ರಧಾನಮಂತ್ರಿಗಳೇ ಈ ಚಲನಚಿತ್ರದ ಮನರಂಜನಾ ತೆರಿಗೆಯನ್ನು ರದ್ದುಗೊಳಿಸಲು ಸೂಚಿಸಿದ್ದಾರೆ. ಒಂದು ಸಿನೆಮಾ ಕಲೆಯ ನೆಲೆಯಲ್ಲಿದ್ದರೆ ಅದು ಸಿನೆಮಾ. ಕಲೆಯ ಹೊರತಾಗಿ ರಾಜಕೀಯ ಉದ್ದೇಶವನ್ನೊಳಗೊಂಡರೆ ಅದು ಪ್ರಾಪಗಂಡವಲ್ಲದೆ ಇನ್ನೇನು? ಸಿಂಗಾಪುರದಲ್ಲಿ ಈ ಸಿನೆಮಾ ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ. ಹರಿಯಾಣದಲ್ಲೂ ಈ ಸಿನೆಮಾಕ್ಕೆ ತೆರಿಗೆ ರದ್ದು ಮಾಡಲು ಸರ್ಕಾರ ಒಪ್ಪಲಿಲ್ಲ. ಕೋಮುಸಂಘರ್ಷದಲ್ಲಿ ಒಂದು ಸಮುದಾಯಕ್ಕೆ ಆದ ದೌರ್ಜನ್ಯ, ನೋವುಗಳು ಮತ್ತೊಂದು ಸಮುದಾಯದ ದೌರ್ಜನ್ಯ, ನೋವನ್ನು ಮುಚ್ಚಿಬಿಡುವುದಿಲ್ಲ. ಇಂತಹ ಸತ್ಯ ಮುಚ್ಚಿಡುವ, ಸತ್ಯದ ಹೆಸರಿನಲ್ಲಿ ಅರ್ಧ ಸುಳ್ಳಿನ ಸರಮಾಲೆಗಳನ್ನು ಸಮಾಜದಲ್ಲಿ ಪಸರಿಸಿ ಕಂದಕಗಳನ್ನು ದೊಡ್ಡ ಮಾಡುವುದು ರಾಜಕೀಯ ಹುನ್ನಾರವಲ್ಲದೆ ಇನ್ನೇನು? ಎಂದು ಕೇಳುತ್ತಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರವಿರೋಧದ ಹೇಳಿಕೆಗಳು ಭರ್ತಿಯಾಗಿವೆ. ಕಾಶ್ಮೀರ ಫೈಲ್ಸ್ ಚಲನಚಿತ್ರದ ಮೊದಲ ದೃಶ್ಯವೇ ಇದೊಂದು ಪ್ರಾಪಗೆಂಡ ಎನ್ನುವುದನ್ನು ಪ್ರಮಾಣೀಕರಿಸುತ್ತದೆ. ಕೇವಲ ಅರ್ಧಗಂಟೆಯ ಚಿತ್ರ ನೋಡುವಷ್ಟರಲ್ಲಿ ಇದೊಂದು ದ್ವೇಷ ಬಿತ್ತುವ, ಒಂದು ಸಮುದಾಯವನ್ನು ಸಂಪೂರ್ಣವಾಗಿ ಖಳನಾಯಕನನ್ನಾಗಿಸುವ ದೊಡ್ಡ ಕ್ಯಾನ್ವಾಸಿನಲ್ಲಿ ಬರೆದ ಕ್ರೌರ್ಯದ ಚಿತ್ರಣವೆಂದಷ್ಟೇ ಅನಿಸುತ್ತದೆ. ಆ ನಂತರ ನಡೆಯುವ ಯಾವುದೇ ಭಾಷಣ, ಅತ್ಯಾಚಾರ, ಜೀವನ್ಮರಣದ ಹೋರಾಟಗಳೆಲ್ಲ ನೋಡುಗನಲ್ಲಿ ಉಸಿರುಗಟ್ಟಿಸುತ್ತದೆ. ಇದಕ್ಕೆ ಸತ್ಯದ ಸರ್ಟಿಫಿಕೇಟು ಕೊಡುವುದಾದರೆ ಇದು ಸಾಕ್ಷ್ಯಚಿತ್ರವೇ? ಅಲ್ಲ, ಒಂದು ಸಿನೆಮಾ. ಸಿನೇಮಾ ಎಂಬುದು ಬರಹವಿದ್ದಂತೆ. ಲೇಖಕನ ಮನಸ್ಥಿತಿಯ ಕನ್ನಡಿಯಂತೆ. ನಿರ್ದೇಶಕ, ನಿರ್ಮಾಪಕರ ಮನಸ್ಸಿನ ಕನ್ನಡಿಯಷ್ಟೆ. ಈ ಕನ್ನಡಿಯನ್ನೇ ಇಡೀ ಕಾಶ್ಮೀರಿ ಪಂಡಿತರ ಕನ್ನಡಿಯೂ ಹೌದು ಎನ್ನುವ ಹಾಗೆ ಬಿಂಬಿಸಿದ್ದು ರಾಜಕೀಯದ ಢಾಳ ಲೇಪನ ಈ ಚಿತ್ರಕ್ಕಿದೆಯೆಂಬುದನ್ನು ಪುಷ್ಟೀಕರಿಸುತ್ತದೆ. ಆದಾಗ್ಯೂ ಭಾರತೀಯ ಬಹುಸಂಖ್ಯಾತ ವರ್ಗವು ಇದೊಂದು ಹಸಿ ಸತ್ಯವೆಂದು ಬಾಯಿಂದ ಬಾಯಿಗೆ ಹರಡಿ ಕಣ್ಣುಬಿಟ್ಟುಕೊಂಡು ಪೂರ್ತಿ 2-50ಗಂಟೆಗಳ ಕಾಲ ನೋಡಿದೆಯೆಂದರೆ ನಮ್ಮ ಸಮಾಜದಲ್ಲಿ ಜನರ ಹೃದಯ ಮತ್ತು ಸ್ಪಂದನೆಗಳು ಯಾವ ರೀತಿ ನ್ಯಾಯ, ಅನ್ಯಾಯ ಮತ್ತು ಸತ್ಯ,ಅಸತ್ಯಗಳ ನಡುವಿನ ಅಂತರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿವೆ ಎನ್ನುವುದನ್ನು ತೋರಿಸುತ್ತದೆ. ಒಳಗಣ್ಣು ಮುಚ್ಚಿದ ಇಂತಹ ಬಹುಸಂಖ್ಯಾತ ಪ್ರೇಕ್ಷಕ ವರ್ಗವು ಸಮಾಜದಲ್ಲಿ ನಡೆಯುತ್ತಿರುವ ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆ ಎಂದು ನಂಬುವುದಾದರೂ ಹೇಗೆ?

ಪತಿಯ ಆಜ್ಞೆಯನ್ನು ಪತ್ನಿ ಪಾಲಿಸಬೇಕಾ?

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾಲಂವೊಂದರ ಶೀರ್ಷಿಕೆ ಇದು. ಇದರಲ್ಲಿ ವೃದ್ಧೆಯೊಬ್ಬಳು ಪಾರ್ವತಿಗೆ ಉಪದೇಶಮಾಡುವ ಸನ್ನಿವೇಶ ಬರುತ್ತದೆ. ಅದರಲ್ಲಿ ಆಕೆ ಗಂಡನೊಂದಿಗೆ ಹೇಗೆ ಇರಬೇಕೆಂದು ಉಪದೇಶಿಸುತ್ತಾಳೆ. 22ನೇ ಶತಮಾನದಲ್ಲೂ ಈ ಉಪದೇಶಗಳ ಪ್ರಸ್ತುತತೆ ಎಷ್ಟು? ಎಂಬ ಅರಿವು ಲೇಖಕರಿಗೆ ಇರಬೇಕಿತ್ತು ಎನ್ನುವುದು ಬಹುತೇಕ ವಾಚಕರ ಅಭಿಪ್ರಾಯ. ಅದೊಂದು ಪತ್ರಿಕಾಧರ್ಮಕ್ಕೇ ಅಪಚಾರ. ಕೋಮು ಭಾವನೆಯನ್ನು ಮೀರಿದ ಎಂದು ಬ್ರ್ಯಾಂಡ್ ಆದ ಜನಪ್ರಿಯ ದಿನಪತ್ರಿಕೆಯಲ್ಲಿ ಈ ರೀತಿಯ ಲೇಖನ ಪ್ರಕಟವಾಗುವುದು ಅಕ್ಷಮ್ಯ ಅಪರಾಧವೆಂತಲೇ ಒಂದು ವರ್ಗ ಪರಿಗಣಿಸಿತು. ಅವರಲ್ಲಿ ಬಹುತೇಕರು ಖುದ್ದು ಪತ್ರಿಕೆಗಳ ಬರಹಗಾರರು, ಲೇಖಕರು, ಸಾಹಿತಿಗಳು ಇನ್ನೂ ಏನೇನೊ. ಅವರು ಒಂದು ಸೂಕ್ಷ್ಮವನ್ನು ಅರಿಯದೇ ಘಟನೆಗೆ ಓವರ್ ರಿಯಾಕ್ಟ್ ಮಾಡಿದರೆಂದು ನನ್ನ ಭಾವನೆ.

ವೃತ್ತಪತ್ರಿಕೆಗಳಲ್ಲಿ ಈ ಅಚ್ಚಿಸುವ ಪ್ರಕ್ರಿಯೆ ಕೆಲವೊಮ್ಮೆ ತುರ್ತಾಗಿ ನಡೆಯುತ್ತದೆ. ಸಂಪಾದಕರ ಕಣ್ಣುತಪ್ಪಿ ಮುದ್ರಣಗೊಳ್ಳುತ್ತದೆ. ಇನ್ನು ಕೆಲವೊಮ್ಮೆ ಸುಮ್ಮನೆ ಓದಿ ವಿವೇಚನೆಯನ್ನು ಓದುಗನಿಗೆ ಬಿಡಲಾಗುತ್ತದೆ. ಬಹುಶಃ ಈ ಲೇಖನವನ್ನು ಓದಿ ತಲೆಬರಹ ಮಾತ್ರ ಹೀಗೆ ಕೊಟ್ಟಿರುವುದು ಮೂರನೆಯ ವರ್ಗಕ್ಕೆ ಸೇರಿದ್ದಾಗಿದೆ. ವಿವೇಚನೆಯನ್ನು ಓದುಗನಿಗೆ ಬಿಡಲಾಗಿದೆ. ಈ ಉಪದೇಶ ಇವತ್ತಿಗೆ ಅಪ್ರಸ್ತುತ ಎನ್ನುವವರು ಒಂದು ವಿಷಯವನ್ನು ಗಮನಿಸಬೇಕು. ಪ್ರಸ್ತುತ ಟಿವಿಗಳಲ್ಲಿ ಬರುವ ಜ್ಯೋತಿಷಿಗಳಲ್ಲಿ ಬಹುತೇಕರು ಇಂತಹ ಹಲವು ಉಪದೇಶಗಳನ್ನು ಮಾಡುತ್ತಾರೆ. ಇವುಗಳನ್ನು ನೋಡುವ ಎಷ್ಟೋ ಹೆಣ್ಣುಮಕ್ಕಳು ಯಾವ ಮಗ್ಗುಲಿನಲ್ಲಿ, ಯಾವ ಜಾವಕ್ಕೆ ಎದ್ದರೆ ಶುಭ ಎನ್ನುವುದರಿಂದ ಹಿಡಿದು ಈ ಪತಿ ಪುರಾಣಗಳವರೆಗೆ ಪಾಲಿಸುತ್ತಾರೆ. ಆ ಜ್ಯೋತಿಷಿ ಹೇಳಿದ್ದಷ್ಟೂ ಇವರಿಗೆ ವೇದವಾಕ್ಯ. ಇನ್ನು ಪ್ರಜಾವಾಣಿ ಬಿಟ್ಟು ಉಳಿದೆಲ್ಲ ಪತ್ರಿಕೆಗಳಲ್ಲೂ ಇಂತಹ ಆಚಾರ, ವಿಚಾರಗಳು ಪುಂಖಾನುಪುಂಖ ಹರಿಯುತ್ತವೆ. ಅವರು ಮಾಡದ ಒಂದೇ ಒಂದು ತಪ್ಪು ಎಂದರೆ ಇಂತಹ ``ಓದುಗನ ವಿವೇಚನೆ’’ಗೆ ಬಿಡುವ ತಲೆಬರಹವನ್ನು ಆ ಬರವಣಿಗೆಗಳಿಗೆ ನೀಡದಿರುವುದು.

ಇವತ್ತು ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಸದ್ದಿಲ್ಲದೇ ಹಳೆಯ ಮೌಲ್ಯಗಳು ಚಿಗುರೊಡೆಯುತ್ತಿರುವುದು ಯಾರಿಗೂ ಕಾಣುತ್ತಿಲ್ಲವೆಂದೇ ಹೇಳಬಹುದು. ಸರಿಯಾಗಿ ನೋಡಿದರೆ ಅದು ಬಹುಮಾಧ್ಯಮಗಳಲ್ಲಿ ಢಾಳಾಗಿ ಕಾಣಿಸುತ್ತದೆ. ನೋಡುವ ಕಣ್ಣು ಬೇಕಷ್ಟೆ. ಹಾಗೆ ನೋಡಿ, ನೋಡಿ ತಕರಾರು ತೆಗೆಯುವ ಮನಸ್ಸುಗಳು ಹೆಚ್ಚಾಗಬೇಕು. ಕೇವಲ ಒಂದು ಶೀರ್ಷಿಕೆಗೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಬರುವ ಪುಕ್ಕಟೆ ಜ್ಯೋತಿಷ್ಯದ ಉಪದೇಶಗಳು, ಲೇಖನಗಳು ಎಲ್ಲವೂ ಚರ್ಚೆಗೊಳಪಡಬೇಕು. ಆಗ ನಿಜವಾಗಿ ವಾಚಕರ ಕೆಲಸ ಪೂರ್ಣಗೊಳ್ಳುತ್ತದೆ. ಅದು ಬಿಟ್ಟು ಇದು ಸಮಾಜವನ್ನು ಒಡೆಯುವ ಮತ್ತು ಹಿಂದೂಧರ್ಮವನ್ನು ಹೀಗಳೆಯಲೆಂದೇ ಪ್ರಕಟಗೊಳಿಸಿರುವ ಕಾರ್ಯತಂತ್ರ ಎಂದು ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ.

ಇನ್ನು ಶೀರ್ಷಿಕೆಯ ವಿಚಾರಕ್ಕೆ ಬಂದರೆ, ಪತಿಯ ಆಜ್ಞೆಯನ್ನು ಪತ್ನಿ ಪಾಲಿಸಬೇಕೆ? ಅಥವಾ ಪತ್ನಿಯ ಆಜ್ಞೆಯನ್ನು ಪತಿ ಪಾಲಿಸಬೇಕೆ ಎನ್ನುವುದು ದಂಪತಿಯ ಖಾಸಗಿ ವಿಚಾರ. ಇದು ಸಾಮಾಜಿಕವಾಗಿ ಪ್ರಶ್ನೆಗೊಳಗಾಗುವುದಾದರೆ, ಯಾರು ಯಾರ ಆಜ್ಞೆಯನ್ನೂ ಪಾಲಿಸಬೇಕಾಗಿಲ್ಲ. ಇದೇ ಧರ್ಮದ ಮಹಾಕಾವ್ಯ ಮಹಾಭಾರತವು ಜೀವನದ ಅತ್ಯುತ್ತಮ ಗೆಳೆಯ/ಗೆಳತಿ ಯಾರೆಂದರೆ ಸಂಗಾತಿಯೆನ್ನುತ್ತದೆ. ಈ ಪುರಾಣದಲ್ಲಿ ಬರುವ ಶಿವ-ಪಾರ್ವತಿಯರೇ ಸ್ವತಃ ಯಾರ ಆಜ್ಞೆಯನ್ನು ಯಾರೂ ಪಾಲಿಸುವವರಲ್ಲ. ಅವಳಿಗೇನು ಅನಿಸುತ್ತದೆಯೊ, ಬೇಕೊ ಅದನ್ನೇ ಶಿವೆ ಮಾಡುತ್ತಾಳೆ. ಶಿವ ತನಗೇನನ್ನಿಸುತ್ತೊ ಅದನ್ನೇ ಮಾಡುತ್ತಾನೆ ಮತ್ತು ಬದುಕುತ್ತಾನೆ. ಸ್ಮಶಾನವಾಸಿ ಶಿವ ವಿರಾಗಿ. ಸರ್ವಾಲಂಕಾರಭೂಶಿತೆ ಶಿವೆ ಅನುರಾಗಿ. ಒಬ್ಬರ ಅಸ್ತಿತ್ವವನ್ನು ಇನ್ನೊಬ್ಬರು ಅಧಿಗಮಿಸಲಾರದ ಸಾಂಗತ್ಯ ಅದು. ಇವರಿಬ್ಬರಿಗೆ ಸಂಬಂಧಿಸಿದ ಯಾವುದೇ ಪುರಾಣಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಇರುವುದು, ತಮ್ಮ ಕರ್ತವ್ಯಗಳ ಪರಿಧಿಯಲ್ಲಿ ಸ್ವತಂತ್ರವಾಗಿ ನಿರ್ಧರಿಸುವುದು ಎಲ್ಲವನ್ನೂ ಕಾಣಬಹುದು. ಉದಾಹರಣೆಗೆ ಕಾಳಿಯ ರೂಪದಲ್ಲಿ ರಕ್ತಬೀಜನನ್ನು ಸಂಹರಿಸುವ ಸಂದರ್ಭವೇ ಇರಬಹುದು. ಇಂತಹ ದಾಂಪತ್ಯದಲ್ಲಿ ಆಜ್ಞೆ, ಅನುಸರಣೆಗಳಿಗೆ ಎಲ್ಲಿಯ ಮಹತ್ವ? ಏನಿದ್ದರೂ ಒಬ್ಬರನ್ನೊಬ್ಬರು ಪೂರಕವಾಗಿ ಬಿಟ್ಟುಕೊಡದ ಸ್ನೇಹವಷ್ಟೆ.

ವೃದ್ಧೆಯೊಬ್ಬಳು ಆಗಲೂ ಇದ್ದಳು ! ಈಗಲೂ ಇರುತ್ತಾಳೆ. ಮುಂದೆಯೂ ಇರಲಿದ್ದಾಳೆ. ಇವತ್ತಿಗೂ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೊರಡುವಾಗ ನೀನು ಪತಿಯನ್ನು ಅನುಸರಿಸಿ ಹೆತ್ತವರಿಗೆ ಹೆಸರು ತಾ ಎನ್ನುವ ಅರ್ಥದ ಹಾಡುಗಳನ್ನು ಹೇಳಿಯೇ ದಿಬ್ಬಣವನ್ನು ಕಳಿಸಿಕೊಡಲಾಗುತ್ತದೆ. ಇದೊಂತರ ತನ್ನ ಅನುಭವವನ್ನು ಹಿರಿಯಳೊಬ್ಬಳು ಮುಂದಿನವರಿಗೆ ದಾಟಿಸಿದ ಹಾಗೆ. ಬುದ್ಧಿವಂತ ಹೆಂಡತಿ ಗಂಡನ ಎಲ್ಲಾ ಆಜ್ಞೆಗಳನ್ನು ಪಾಲಿಸಿದ ಹಾಗೆ ಅಭಿನಯಿಸುತ್ತ ತನಗೆ ಬೇಕಾದ ದಾಂಪತ್ಯವನ್ನು ಸಾಧಿಸುತ್ತಾಳೆ. ಇದನ್ನು ಗಂಡಿಗೆ ಹೇಳಿಕೊಡದ ಪರಿಣಾಮ ಇವತ್ತಿಗೂ ಅಹಮ್ಮಿನಲ್ಲಿ ಕೊಚ್ಚಿಹೋಗಿ ಒಂಟಿತನವನ್ನು ಅನುಭವಿಸುವ ಗಂಡಂದಿರನ್ನು ಕಾಣುತ್ತೇವೆ. ಆದಾಗ್ಯೂ ಹೆಂಡತಿ ಹೇಳಿದ್ದನ್ನು ಕೇಳುತ್ತ ಅಥವಾ ಕೇಳಿದ ಹಾಗೆ ಅಭಿನಯಿಸುತ್ತ ಸುಂದರ ದಾಂಪತ್ಯ ಸುಖವನ್ನು ಸಾಧಿಸಿಕೊಂಡ ಬುದ್ಧಿವಂತ ಗಂಡಸರೂ ಇದ್ದಾರೆ. ಇವೆಲ್ಲ ಮನೋವ್ಯಾಪಾರಗಳು ಹಿರಿಯಳಾಗಿ ವೃದ್ಧೆ ಪಾರ್ವತಿಗೆ ಹೇಳಿದ್ದರಲ್ಲಿ ಅನುಚಿತವೇನಿಲ್ಲ. ಆದರೆ ಲೇಖಕ ತನ್ನದೂ ಇರಲಿ ಎಂದು ಅಪತ್ಯ, ಅಸಂಗತ ಅಧಿಕಪ್ರಸಂಗಿತನ ತೋರಿರುವುದು ಮಾತ್ರ ಸಹ್ಯವೆನಿಸುವುದಿಲ್ಲ.

ಇಂತಹ ಲೇಖಕನ ಅಧಿಕಪ್ರಸಂಗಿತನವನ್ನು ನಾವು ಬಹಳಷ್ಟು ಗ್ರಂಥಗಳಲ್ಲಿ ಕಾಣಬಹುದು. ಉದಾಹರಣೆಗೆ ಗೀತಾಪ್ರೆಸ್ ನಿಂದ ಪ್ರಕಟವಾಗಿರುವ ವಾಲ್ಮೀಕಿ ರಾಮಾಯಣದಲ್ಲಿ ರಾಮನು ರಾವಣನನ್ನು ವಧಿಸಿ ಸೀತೆಯನ್ನು ಅಯೋಧ್ಯೆಗೆ ಕರೆದೊಯ್ಯಬೇಕು. ಆ ಸಂದರ್ಭದಲ್ಲಿ ಸೀತೆ ಕೇಳುತ್ತಾಳೆ. ನೀನು ನನಗಾಗಿ ಈ ಯುದ್ಧ ಮಾಡಿದೆಯೋ? ಇಲ್ಲ, ನಾನು ಜನರಿಗಾಗಿ ಯುದ್ಧ ಮಾಡಿದೆ. ನೀನೀಗ ನಾಯಿ ಮುಟ್ಟಿದ ತುಪ್ಪದ ಮಡಿಕೆ, ನನಗೆ ನಿನ್ನ ಮೇಲೆ ಯಾವುದೇ ಆಸಕ್ತಿ ಇಲ್ಲ! ಅದೇ ತುಳಸಿ ರಾಮಾಯಣದಲ್ಲಿ ಈ ಸಂದರ್ಭವನ್ನು ಕೈಬಿಡಲಾಗಿದೆ. ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾದ ಸಿಯಾ ಕಾ ರಾಮ್ ನಲ್ಲಿ ಈ ಸಂದರ್ಭವನ್ನು ರಾಮನೊಳಗಿನ ರಾಜನೊಬ್ಬ ಅವನ ಪ್ರಜ್ಞೆಯನ್ನು ಪ್ರಶ್ನೆ ಮಾಡುವ, ಆ ಮೂಲಕ ರಾಮನೊಳಗಿನ ಒಬ್ಬ ಪ್ರೇಮಿ ಮತ್ತು ಮನುಷ್ಯ ತಲ್ಲಣಗೊಳ್ಳುವ ಹಾಗೆ ಚಿತ್ರಿಸಲಾಗಿದೆ. ಇನ್ನು ಶಂಭೂಕನನ್ನು ಹಿಂದೆ ಮುಂದೆ ನೋಡದೆ ಕೊಲ್ಲುವ ಕಟುಕ ರಾಮನನ್ನು ವಾಲ್ಮೀಕಿ ಚಿತ್ರಿಸಿದ್ದರೆ, ತುಳಸೀದಾಸರು ರಾಮನ ಪ್ರಜ್ಞೆಯನ್ನು ಪ್ರಶ್ನಿಸಿಕೊಳ್ಳುತ್ತ ಶಂಭೂಕನನ್ನು ಕೊಲ್ಲುವುದನ್ನು ಕಟ್ಟಿಕೊಡುತ್ತಾರೆ.

ಹೀಗೆ ಲೇಖಕನ ಮನೋಧರ್ಮವೇ ಅದನ್ನು ನಿರೂಪಿಸುತ್ತಿರುವ ನಿರೂಪಕನ ಧೋರಣೆ ಎಂತಲೂ, ಆ ಲೇಖಕನ ಅಭಿಪ್ರಾಯವೇ ಆ ಮಾಧ್ಯಮದ ಅಭಿಪ್ರಾಯ ಎಂತಲೂ ವಾಚಕರು ಪರಿಗಣಿಸಬಾರದು. ಇದರ ಬಗ್ಗೆ ಚಿಂತನೆ ಬೇಕು, ಆದರೆ ಆ ಚಿಂತನೆಗೆ ಹಚ್ಚಿದ ಮಾಧ್ಯಮದ ಮೇಲೆ ವೃಥಾ ದೋಷಾರೋಪಣೆ ಸ್ವತಃ ಲೇಖಕರಾದ ಆಕ್ಷೇಪ ತೆಗೆದ ಯಾರಿಗೂ ಶೋಭೆ ತರುವುದಿಲ್ಲ.


ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?

ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ...