ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಹತ್ತನೆ ತರಗತಿಯ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆಯಾಗಿದೆ. ಇದು ನಿನ್ನೆನ ಸುದ್ದಿ. ಸಾಮಾಜಿಕ ಮಾಧ್ಯಮದಲ್ಲೆಂತೂ ಇದರ ಬಗ್ಗೆ ಚರ್ಚೆಯೊ ಚರ್ಚೆ. ಇದು ಅನಿರೀಕ್ಷಿತವೇ? ಇದು ಪ್ರಶ್ನೆ.
25 ವರ್ಷಗಳ ಹಿಂದೆ ಹೀಗಿತ್ತಾ? ಯೋಚನೆ ಮಾಡಿದೆ.
ಖಂಡಿತ ಇತ್ತು. ಆದರೆ ಹೊರಗೆ ಬರುತ್ತಿರಲಿಲ್ಲ. ನಾನು ಚಿಕ್ಕವಳಿದ್ದಾಗ ನನ್ನದೇ ವಯಸ್ಸಿನ ಕೆಲವು ಹೆಣ್ಣುಮಕ್ಕಳಿದ್ದರು.
ಅವರ ಲೈಂಗಿಕ ಜ್ಞಾನ ಎಷ್ಟಿತ್ತು ಎಂದರೆ ಇವತ್ತು ಕುಳಿತು
ಯೋಚಿಸುವಾಗ ಅವರ ಬಗ್ಗೆ ಅಬ್ಬಾ! ಎನಿಸುತ್ತದೆ.. ಒಂದನೇ ತರಗತಿಯಲ್ಲಿದ್ದಾಗ ಒಬ್ಬ ಸಹಪಾಠಿ ಹೇಳುತ್ತಿದ್ದುದು
ನೆನಪಿದೆ. ಮಕ್ಕಳಾಗುವ ಸಂಪೂರ್ಣ ಪ್ರಕ್ರಿಯೆ ಹೇಳಿದ್ದಳು. ನನಗೆ ಎಷ್ಟು ಭಯವಾಗಿತ್ತೆಂದರೆ ಆ ಹುಡುಗಿಯ
ಬಗ್ಗೆ ಯೋಚಿಸಲೂ ಎಷ್ಟೋ ವರ್ಷ ಭಯ ಪಟ್ಟುಕೊಂಡಿದ್ದೆ. ಇನ್ನು ದೊಡ್ಡವಳಾಗ್ತಾ ಆಗ್ತಾ ಆಗ್ತಾ ಅಂತಹ
ಹಲವಾರು ಹುಡುಗಿಯರ ಒಡನಾಟ ಸಿಕ್ಕಿತ್ತು. 7 – 10ನೇ ತರಗತಿ ಕೇವಲ ಪ್ರೇಮಪತ್ರಕ್ಕೆ, ಅದಕ್ಕೆ ಸಂಬಂಧಪಟ್ಟ
ಪ್ರಯೋಗಕ್ಕೆ ಮಾತ್ರವಲ್ಲ ಲೈಂಗಿಕತೆಗೆ ಸಂಬಂಧಪಟ್ಟೂ ಪ್ರಯೋಗಗಳು ನಡೆಯುತ್ತಿದ್ದವು. ಕೆಲವು ಶಿಕ್ಷಕರ
ಹೆಸರು, ಅಕ್ಕಂದಿರ ಹೆಸರೂ ಕೇಳಿಬರುತ್ತಿತ್ತು. ನನಗಿನ್ನೂ ಹದಿನೆಂಟು ತುಂಬದೇ ಇರುವಾಗ ಅಂತಹ ಒಬ್ಬ
ಅಂಕಲ್ಲು ಬಂದು ನಿನ್ನ ಅಕ್ಕ ಎಷ್ಟು ಕೊಪರೇಟ್ ಮಾಡುತ್ತಿದ್ದಳು, ನೀನ್ಯಾಕೆ ಹೀಗೆ ಎಂದು ಕೇಳಿದ್ದರು.
ಇವೆಲ್ಲ ಅವತ್ತಿನ ನನ್ನ ಮನೋಭೂಮಿಕೆಯಲ್ಲಿ ಭಯಂಕರ ಬಿರುಗಾಳಿಯೆಬ್ಬಿಸಿದ್ದವು.
ಅವತ್ತು ಗರ್ಭನಿರೋಧಕವಾಗಿ ಏನು ಬಳಸುತ್ತಿದ್ದರೋ
ಗೊತ್ತಿಲ್ಲ, ನಾನೂ ಕೇಳುವಷ್ಟು ದೊಡ್ಡವಳಾಗಿರಲಿಲ್ಲ. ಅನುಭವವಿಲ್ಲದ, ನಾಚಿಕೆ, ಅಂಜಿಕೆಗಳಿಂದ ಸತ್ತುಹೋಗುವಷ್ಟು
ಮುದುರಿಕೊಳ್ಳುತ್ತಿದ್ದವಳು ಆ ಬಗ್ಗೆ ಯೋಚಿಸಿಯೂ ಇರಲಿಲ್ಲ. ಇವತ್ತು ಈ ವಿಷಯ ನಾನು ಅಂದಿಗೆ ಹೋಗಿ
ನಿಲ್ಲುವಂತೆ ಮಾಡಿದೆ. ಈಗ ಅನಿಸುತ್ತದೆ. ಬಹುಶಃ ಅವರು ವಯಸ್ಸಿನಲ್ಲಿ12- 16ರ ಒಳಗಿದ್ದರೂ ಲೈಂಗಿಕವಾಗಿ
ಆ ವಯಸ್ಸನ್ನು ಮೀರಿದ ಪ್ರಬುದ್ಧರಾಗಿದ್ದರು. ಈ ಲೈಂಗಿಕ ಪ್ರಬುದ್ಧತೆ ಕೇವಲ ಅನುಭವದಿಂದ ಮಾತ್ರವಲ್ಲ,
ಜೈವಿಕವಾಗಿಯೂ ಬರುತ್ತದೆಯಂತೆ. ಉದಾಹರಣೆಗೆ 18 ವರ್ಷ ದಾಟಿದ ಮೇಲೆಯೇ ಹೆಣ್ಣಿಗೆ ಮದುವೆ ಎಂದು ಮಾಡಿರುವ
ಸಂಗತಿ. ಜೈವಿಕವಾಗಿ ಆಕೆ 12-16 ವರ್ಷಗಳ ಒಳಗೇ ಮಕ್ಕಳಾಗುವ ಹಂತಕ್ಕೆ ದೇಹ ದಾಟಿದ್ದರೂ ಮನಸ್ಸಿನ್ನೂ
ಮಾಗಿರುವುದಿಲ್ಲ. ಕೆಲವು ಹೆಣ್ಣುಮಕ್ಕಳಿಗೆ `ಆ ಮನಸ್ಸು’ ಮಾಗಿರುತ್ತದೆ. ಹಾಗಾಗಿ 10ನೇ ತರಗತಿಯ ಹೊತ್ತಿಗೇ
ಕೆಲವು ಹೆಣ್ಣುಮಕ್ಕಳು ಒಬ್ಬರು/ಒಬ್ಬರಿಗಿಂತ ಹೆಚ್ಚು ಬಾಯ್ ಫ್ರೆಂಡ್ ಗಳನ್ನು ನಿಭಾಯಿಸಬಲ್ಲವರಾಗಿರುತ್ತಾರೆ.
ಈಗ ಮಾಧ್ಯಮದಲ್ಲಿ ಎಲ್ಲವೂ ಮುಕ್ತವಾಗಿರಬೇಕಾದರೆ ಈ ಬಗ್ಗೆ ಅರಿವು ಮತ್ತು ಮಾಗುವಿಕೆ ಬೇಗನೆ ಘಟಿಸಬಹುದು.
ಅದಕ್ಕೆ ತಕ್ಕಂತೆ ಆ ಹುಡುಗಿ ಸುರಕ್ಷತೆಗಾಗಿ ಕಾಂಡೋಮ್ ಇಟ್ಟುಕೊಂಡಿದ್ದಾಳೆ.
ಅದರ ಬದಲು ಆಪ್ತಸಮಾಲೊಚನೆ ಎಂದು ಕರೆದುಕೊಂಡು ಹೋದರೆ
ಆ ಹುಡುಗಿ ಮನಸ್ಸಿನಲ್ಲೇ ನಕ್ಕಿರುತ್ತಾಳೆ. ಅಲ್ಲ, ನನ್ನ ಸುರಕ್ಷತೆಗಾಗಿ ನಾನು ಇದನ್ನು ಇಟ್ಟುಕೊಂಡಿದ್ದೇನೆಂದರೆ
ಇದರ ಸಾಧಕ ಬಾಧಕಗಳು ನನಗಲ್ಲದೆ ಬೇರೆ ಯಾರಿಗೆ ತಿಳಿದೀತು ಎಂದು. ಈ ಆಪ್ತಸಮಾಲೊಚಕರೂ ಸ್ವಲ್ಪ ಪ್ರಬುದ್ಧರಾಗಿದ್ದರೆ
ಸರಿ. ಇಲ್ಲದೇ ಅವಳು ಬಂದು ಕುಳಿತ ಕೂಡಲೆ ಮಗು ನೀನಿನ್ನೂ ಚಿಕ್ಕವಳು, ಹೀಗೆಲ್ಲ ಮಾಡಬಾರದು. ಅದೆಲ್ಲ
ಮದುವೆ ಅಂತಾದಮೇಲೆ ಎಂದು ಮನೆಯಲ್ಲಿ ಅಜ್ಜ, ಅಜ್ಜಿ ಹೇಳುವ ಹಾಗೆ ಹೇಳಲು ಶುರು ಮಾಡಿದರೆ ಅಲ್ಲಿಗೆ
ಕತೆ ಮುಗಿಯಿತು. ಆ ಹುಡುಗಿ ಮನಸ್ಸಿನಲ್ಲಿ ಇನ್ನಷ್ಟು ನಕ್ಕು, 10 ವರ್ಷದ ಮೇಲೆ ಸಿಗಿ ನೀವು, ನಾನು
ನಿಮಗೆ ಆಪ್ತಸಮಾಲೋಚನೆ ಮಾಡುತ್ತೇನೆ ಎಂದಿರುತ್ತಾಳೆ. ಯಾಕೆಂದರೆ ಇವತ್ತಿನ ಮಕ್ಕಳು, ಅವರ ಮನಸ್ಸು
ಬಹಳ ಮಾಗಿರುತ್ತವೆ. ಸಾಧಕ, ಬಾಧಕಗಳನ್ನು ಯೋಚಿಸಿಯೇ ಎಲ್ಲವನ್ನೂ ಮಾಡುತ್ತಾರೆ. ನಮಗೆ ಪೋಷಕರಿಗೆ ಭರವಸೆ
ಇರಬೇಕು. ಅವರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯುವ ಸಲುಗೆ ಇರಬೇಕು. ತಪ್ಪು ಎನಿಸಿದಾಗ ತಿದ್ದಿ ಸರಿದಾರಿಗೆ
ತರುವ ಪ್ರೀತಿ ಇರಬೇಕು. ಏನನ್ನಾದರೂ ಮುಚ್ಚಿಡದೆ ಎಲ್ಲವನ್ನೂ ಹೇಳಿಕೊಳ್ಳಬಹುದಾದ ಭರವಸೆಯನ್ನು ಮಕ್ಕಳಲ್ಲಿ
ಹುಟ್ಟಿಸುವ ಹಾಗೆ ಸಂಬಂಧ ಇರಬೇಕು.
ಈಗ ಆಪ್ತಸಮಾಲೊಚನೆ ಬೇಕಿರುವುದು ಮಕ್ಕಳಿಗಲ್ಲ,
ಪಾಲಕರಿಗೆ, ಶಿಕ್ಷಕರಿಗೆ ಮತ್ತು ಈ ವಿಷಯವನ್ನು ದೊಡ್ಡದಾಗಿ ಮಾಡಿ ಆ ಶಾಲೆ, ಆ ಹುಡುಗಿಯನ್ನು ಬೊಟ್ಟು
ಮಾಡುತ್ತ ಪ್ರಚಾರ ಪಡೆಯುವ ಮಾಧ್ಯಮ ಮಿತ್ರರಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ