ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾಲಂವೊಂದರ ಶೀರ್ಷಿಕೆ ಇದು. ಇದರಲ್ಲಿ ವೃದ್ಧೆಯೊಬ್ಬಳು ಪಾರ್ವತಿಗೆ ಉಪದೇಶಮಾಡುವ ಸನ್ನಿವೇಶ ಬರುತ್ತದೆ. ಅದರಲ್ಲಿ ಆಕೆ ಗಂಡನೊಂದಿಗೆ ಹೇಗೆ ಇರಬೇಕೆಂದು ಉಪದೇಶಿಸುತ್ತಾಳೆ. 22ನೇ ಶತಮಾನದಲ್ಲೂ ಈ ಉಪದೇಶಗಳ ಪ್ರಸ್ತುತತೆ ಎಷ್ಟು? ಎಂಬ ಅರಿವು ಲೇಖಕರಿಗೆ ಇರಬೇಕಿತ್ತು ಎನ್ನುವುದು ಬಹುತೇಕ ವಾಚಕರ ಅಭಿಪ್ರಾಯ. ಅದೊಂದು ಪತ್ರಿಕಾಧರ್ಮಕ್ಕೇ ಅಪಚಾರ. ಕೋಮು ಭಾವನೆಯನ್ನು ಮೀರಿದ ಎಂದು ಬ್ರ್ಯಾಂಡ್ ಆದ ಜನಪ್ರಿಯ ದಿನಪತ್ರಿಕೆಯಲ್ಲಿ ಈ ರೀತಿಯ ಲೇಖನ ಪ್ರಕಟವಾಗುವುದು ಅಕ್ಷಮ್ಯ ಅಪರಾಧವೆಂತಲೇ ಒಂದು ವರ್ಗ ಪರಿಗಣಿಸಿತು. ಅವರಲ್ಲಿ ಬಹುತೇಕರು ಖುದ್ದು ಪತ್ರಿಕೆಗಳ ಬರಹಗಾರರು, ಲೇಖಕರು, ಸಾಹಿತಿಗಳು ಇನ್ನೂ ಏನೇನೊ. ಅವರು ಒಂದು ಸೂಕ್ಷ್ಮವನ್ನು ಅರಿಯದೇ ಘಟನೆಗೆ ಓವರ್ ರಿಯಾಕ್ಟ್ ಮಾಡಿದರೆಂದು ನನ್ನ ಭಾವನೆ.
ವೃತ್ತಪತ್ರಿಕೆಗಳಲ್ಲಿ
ಈ ಅಚ್ಚಿಸುವ ಪ್ರಕ್ರಿಯೆ ಕೆಲವೊಮ್ಮೆ ತುರ್ತಾಗಿ ನಡೆಯುತ್ತದೆ. ಸಂಪಾದಕರ ಕಣ್ಣುತಪ್ಪಿ ಮುದ್ರಣಗೊಳ್ಳುತ್ತದೆ.
ಇನ್ನು ಕೆಲವೊಮ್ಮೆ ಸುಮ್ಮನೆ ಓದಿ ವಿವೇಚನೆಯನ್ನು ಓದುಗನಿಗೆ ಬಿಡಲಾಗುತ್ತದೆ. ಬಹುಶಃ ಈ ಲೇಖನವನ್ನು
ಓದಿ ತಲೆಬರಹ ಮಾತ್ರ ಹೀಗೆ ಕೊಟ್ಟಿರುವುದು ಮೂರನೆಯ ವರ್ಗಕ್ಕೆ ಸೇರಿದ್ದಾಗಿದೆ. ವಿವೇಚನೆಯನ್ನು ಓದುಗನಿಗೆ
ಬಿಡಲಾಗಿದೆ. ಈ ಉಪದೇಶ ಇವತ್ತಿಗೆ ಅಪ್ರಸ್ತುತ ಎನ್ನುವವರು ಒಂದು ವಿಷಯವನ್ನು ಗಮನಿಸಬೇಕು. ಪ್ರಸ್ತುತ
ಟಿವಿಗಳಲ್ಲಿ ಬರುವ ಜ್ಯೋತಿಷಿಗಳಲ್ಲಿ ಬಹುತೇಕರು ಇಂತಹ ಹಲವು ಉಪದೇಶಗಳನ್ನು ಮಾಡುತ್ತಾರೆ. ಇವುಗಳನ್ನು
ನೋಡುವ ಎಷ್ಟೋ ಹೆಣ್ಣುಮಕ್ಕಳು ಯಾವ ಮಗ್ಗುಲಿನಲ್ಲಿ, ಯಾವ ಜಾವಕ್ಕೆ ಎದ್ದರೆ ಶುಭ ಎನ್ನುವುದರಿಂದ ಹಿಡಿದು
ಈ ಪತಿ ಪುರಾಣಗಳವರೆಗೆ ಪಾಲಿಸುತ್ತಾರೆ. ಆ ಜ್ಯೋತಿಷಿ ಹೇಳಿದ್ದಷ್ಟೂ ಇವರಿಗೆ ವೇದವಾಕ್ಯ. ಇನ್ನು ಪ್ರಜಾವಾಣಿ
ಬಿಟ್ಟು ಉಳಿದೆಲ್ಲ ಪತ್ರಿಕೆಗಳಲ್ಲೂ ಇಂತಹ ಆಚಾರ, ವಿಚಾರಗಳು ಪುಂಖಾನುಪುಂಖ ಹರಿಯುತ್ತವೆ. ಅವರು ಮಾಡದ
ಒಂದೇ ಒಂದು ತಪ್ಪು ಎಂದರೆ ಇಂತಹ ``ಓದುಗನ ವಿವೇಚನೆ’’ಗೆ ಬಿಡುವ ತಲೆಬರಹವನ್ನು ಆ ಬರವಣಿಗೆಗಳಿಗೆ
ನೀಡದಿರುವುದು.
ಇವತ್ತು ಭಾರತೀಯ
ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಸದ್ದಿಲ್ಲದೇ ಹಳೆಯ ಮೌಲ್ಯಗಳು ಚಿಗುರೊಡೆಯುತ್ತಿರುವುದು
ಯಾರಿಗೂ ಕಾಣುತ್ತಿಲ್ಲವೆಂದೇ ಹೇಳಬಹುದು. ಸರಿಯಾಗಿ ನೋಡಿದರೆ ಅದು ಬಹುಮಾಧ್ಯಮಗಳಲ್ಲಿ ಢಾಳಾಗಿ ಕಾಣಿಸುತ್ತದೆ.
ನೋಡುವ ಕಣ್ಣು ಬೇಕಷ್ಟೆ. ಹಾಗೆ ನೋಡಿ, ನೋಡಿ ತಕರಾರು ತೆಗೆಯುವ ಮನಸ್ಸುಗಳು ಹೆಚ್ಚಾಗಬೇಕು. ಕೇವಲ
ಒಂದು ಶೀರ್ಷಿಕೆಗೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಬರುವ ಪುಕ್ಕಟೆ ಜ್ಯೋತಿಷ್ಯದ ಉಪದೇಶಗಳು,
ಲೇಖನಗಳು ಎಲ್ಲವೂ ಚರ್ಚೆಗೊಳಪಡಬೇಕು. ಆಗ ನಿಜವಾಗಿ ವಾಚಕರ ಕೆಲಸ ಪೂರ್ಣಗೊಳ್ಳುತ್ತದೆ. ಅದು ಬಿಟ್ಟು
ಇದು ಸಮಾಜವನ್ನು ಒಡೆಯುವ ಮತ್ತು ಹಿಂದೂಧರ್ಮವನ್ನು ಹೀಗಳೆಯಲೆಂದೇ ಪ್ರಕಟಗೊಳಿಸಿರುವ ಕಾರ್ಯತಂತ್ರ
ಎಂದು ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ.
ಇನ್ನು ಶೀರ್ಷಿಕೆಯ
ವಿಚಾರಕ್ಕೆ ಬಂದರೆ, ಪತಿಯ ಆಜ್ಞೆಯನ್ನು ಪತ್ನಿ ಪಾಲಿಸಬೇಕೆ? ಅಥವಾ ಪತ್ನಿಯ ಆಜ್ಞೆಯನ್ನು ಪತಿ ಪಾಲಿಸಬೇಕೆ
ಎನ್ನುವುದು ದಂಪತಿಯ ಖಾಸಗಿ ವಿಚಾರ. ಇದು ಸಾಮಾಜಿಕವಾಗಿ ಪ್ರಶ್ನೆಗೊಳಗಾಗುವುದಾದರೆ, ಯಾರು ಯಾರ ಆಜ್ಞೆಯನ್ನೂ
ಪಾಲಿಸಬೇಕಾಗಿಲ್ಲ. ಇದೇ ಧರ್ಮದ ಮಹಾಕಾವ್ಯ ಮಹಾಭಾರತವು ಜೀವನದ ಅತ್ಯುತ್ತಮ ಗೆಳೆಯ/ಗೆಳತಿ ಯಾರೆಂದರೆ
ಸಂಗಾತಿಯೆನ್ನುತ್ತದೆ. ಈ ಪುರಾಣದಲ್ಲಿ ಬರುವ ಶಿವ-ಪಾರ್ವತಿಯರೇ ಸ್ವತಃ ಯಾರ ಆಜ್ಞೆಯನ್ನು ಯಾರೂ ಪಾಲಿಸುವವರಲ್ಲ.
ಅವಳಿಗೇನು ಅನಿಸುತ್ತದೆಯೊ, ಬೇಕೊ ಅದನ್ನೇ ಶಿವೆ ಮಾಡುತ್ತಾಳೆ. ಶಿವ ತನಗೇನನ್ನಿಸುತ್ತೊ ಅದನ್ನೇ ಮಾಡುತ್ತಾನೆ
ಮತ್ತು ಬದುಕುತ್ತಾನೆ. ಸ್ಮಶಾನವಾಸಿ ಶಿವ ವಿರಾಗಿ. ಸರ್ವಾಲಂಕಾರಭೂಶಿತೆ ಶಿವೆ ಅನುರಾಗಿ. ಒಬ್ಬರ ಅಸ್ತಿತ್ವವನ್ನು
ಇನ್ನೊಬ್ಬರು ಅಧಿಗಮಿಸಲಾರದ ಸಾಂಗತ್ಯ ಅದು. ಇವರಿಬ್ಬರಿಗೆ ಸಂಬಂಧಿಸಿದ ಯಾವುದೇ ಪುರಾಣಗಳಲ್ಲಿ ಒಬ್ಬರನ್ನೊಬ್ಬರು
ಬಿಟ್ಟುಕೊಡದೇ ಇರುವುದು, ತಮ್ಮ ಕರ್ತವ್ಯಗಳ ಪರಿಧಿಯಲ್ಲಿ ಸ್ವತಂತ್ರವಾಗಿ ನಿರ್ಧರಿಸುವುದು ಎಲ್ಲವನ್ನೂ
ಕಾಣಬಹುದು. ಉದಾಹರಣೆಗೆ ಕಾಳಿಯ ರೂಪದಲ್ಲಿ ರಕ್ತಬೀಜನನ್ನು ಸಂಹರಿಸುವ ಸಂದರ್ಭವೇ ಇರಬಹುದು. ಇಂತಹ
ದಾಂಪತ್ಯದಲ್ಲಿ ಆಜ್ಞೆ, ಅನುಸರಣೆಗಳಿಗೆ ಎಲ್ಲಿಯ ಮಹತ್ವ? ಏನಿದ್ದರೂ ಒಬ್ಬರನ್ನೊಬ್ಬರು ಪೂರಕವಾಗಿ
ಬಿಟ್ಟುಕೊಡದ ಸ್ನೇಹವಷ್ಟೆ.
ವೃದ್ಧೆಯೊಬ್ಬಳು
ಆಗಲೂ ಇದ್ದಳು ! ಈಗಲೂ ಇರುತ್ತಾಳೆ. ಮುಂದೆಯೂ ಇರಲಿದ್ದಾಳೆ. ಇವತ್ತಿಗೂ ಹೆಣ್ಣು ಮದುವೆಯಾಗಿ ಗಂಡನ
ಮನೆಗೆ ಹೊರಡುವಾಗ ನೀನು ಪತಿಯನ್ನು ಅನುಸರಿಸಿ ಹೆತ್ತವರಿಗೆ ಹೆಸರು ತಾ ಎನ್ನುವ ಅರ್ಥದ ಹಾಡುಗಳನ್ನು
ಹೇಳಿಯೇ ದಿಬ್ಬಣವನ್ನು ಕಳಿಸಿಕೊಡಲಾಗುತ್ತದೆ. ಇದೊಂತರ ತನ್ನ ಅನುಭವವನ್ನು ಹಿರಿಯಳೊಬ್ಬಳು ಮುಂದಿನವರಿಗೆ
ದಾಟಿಸಿದ ಹಾಗೆ. ಬುದ್ಧಿವಂತ ಹೆಂಡತಿ ಗಂಡನ ಎಲ್ಲಾ ಆಜ್ಞೆಗಳನ್ನು ಪಾಲಿಸಿದ ಹಾಗೆ ಅಭಿನಯಿಸುತ್ತ ತನಗೆ
ಬೇಕಾದ ದಾಂಪತ್ಯವನ್ನು ಸಾಧಿಸುತ್ತಾಳೆ. ಇದನ್ನು ಗಂಡಿಗೆ ಹೇಳಿಕೊಡದ ಪರಿಣಾಮ ಇವತ್ತಿಗೂ ಅಹಮ್ಮಿನಲ್ಲಿ
ಕೊಚ್ಚಿಹೋಗಿ ಒಂಟಿತನವನ್ನು ಅನುಭವಿಸುವ ಗಂಡಂದಿರನ್ನು ಕಾಣುತ್ತೇವೆ. ಆದಾಗ್ಯೂ ಹೆಂಡತಿ ಹೇಳಿದ್ದನ್ನು
ಕೇಳುತ್ತ ಅಥವಾ ಕೇಳಿದ ಹಾಗೆ ಅಭಿನಯಿಸುತ್ತ ಸುಂದರ ದಾಂಪತ್ಯ ಸುಖವನ್ನು ಸಾಧಿಸಿಕೊಂಡ ಬುದ್ಧಿವಂತ
ಗಂಡಸರೂ ಇದ್ದಾರೆ. ಇವೆಲ್ಲ ಮನೋವ್ಯಾಪಾರಗಳು ಹಿರಿಯಳಾಗಿ ವೃದ್ಧೆ ಪಾರ್ವತಿಗೆ ಹೇಳಿದ್ದರಲ್ಲಿ ಅನುಚಿತವೇನಿಲ್ಲ.
ಆದರೆ ಲೇಖಕ ತನ್ನದೂ ಇರಲಿ ಎಂದು ಅಪತ್ಯ, ಅಸಂಗತ ಅಧಿಕಪ್ರಸಂಗಿತನ ತೋರಿರುವುದು ಮಾತ್ರ ಸಹ್ಯವೆನಿಸುವುದಿಲ್ಲ.
ಇಂತಹ ಲೇಖಕನ ಅಧಿಕಪ್ರಸಂಗಿತನವನ್ನು
ನಾವು ಬಹಳಷ್ಟು ಗ್ರಂಥಗಳಲ್ಲಿ ಕಾಣಬಹುದು. ಉದಾಹರಣೆಗೆ ಗೀತಾಪ್ರೆಸ್ ನಿಂದ ಪ್ರಕಟವಾಗಿರುವ ವಾಲ್ಮೀಕಿ
ರಾಮಾಯಣದಲ್ಲಿ ರಾಮನು ರಾವಣನನ್ನು ವಧಿಸಿ ಸೀತೆಯನ್ನು ಅಯೋಧ್ಯೆಗೆ ಕರೆದೊಯ್ಯಬೇಕು. ಆ ಸಂದರ್ಭದಲ್ಲಿ
ಸೀತೆ ಕೇಳುತ್ತಾಳೆ. ನೀನು ನನಗಾಗಿ ಈ ಯುದ್ಧ ಮಾಡಿದೆಯೋ? ಇಲ್ಲ, ನಾನು ಜನರಿಗಾಗಿ ಯುದ್ಧ ಮಾಡಿದೆ.
ನೀನೀಗ ನಾಯಿ ಮುಟ್ಟಿದ ತುಪ್ಪದ ಮಡಿಕೆ, ನನಗೆ ನಿನ್ನ ಮೇಲೆ ಯಾವುದೇ ಆಸಕ್ತಿ ಇಲ್ಲ! ಅದೇ ತುಳಸಿ ರಾಮಾಯಣದಲ್ಲಿ
ಈ ಸಂದರ್ಭವನ್ನು ಕೈಬಿಡಲಾಗಿದೆ. ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾದ ಸಿಯಾ ಕಾ ರಾಮ್
ನಲ್ಲಿ ಈ ಸಂದರ್ಭವನ್ನು ರಾಮನೊಳಗಿನ ರಾಜನೊಬ್ಬ ಅವನ ಪ್ರಜ್ಞೆಯನ್ನು ಪ್ರಶ್ನೆ ಮಾಡುವ, ಆ ಮೂಲಕ ರಾಮನೊಳಗಿನ
ಒಬ್ಬ ಪ್ರೇಮಿ ಮತ್ತು ಮನುಷ್ಯ ತಲ್ಲಣಗೊಳ್ಳುವ ಹಾಗೆ ಚಿತ್ರಿಸಲಾಗಿದೆ. ಇನ್ನು ಶಂಭೂಕನನ್ನು ಹಿಂದೆ
ಮುಂದೆ ನೋಡದೆ ಕೊಲ್ಲುವ ಕಟುಕ ರಾಮನನ್ನು ವಾಲ್ಮೀಕಿ ಚಿತ್ರಿಸಿದ್ದರೆ, ತುಳಸೀದಾಸರು ರಾಮನ ಪ್ರಜ್ಞೆಯನ್ನು
ಪ್ರಶ್ನಿಸಿಕೊಳ್ಳುತ್ತ ಶಂಭೂಕನನ್ನು ಕೊಲ್ಲುವುದನ್ನು ಕಟ್ಟಿಕೊಡುತ್ತಾರೆ.
ಹೀಗೆ ಲೇಖಕನ ಮನೋಧರ್ಮವೇ
ಅದನ್ನು ನಿರೂಪಿಸುತ್ತಿರುವ ನಿರೂಪಕನ ಧೋರಣೆ ಎಂತಲೂ, ಆ ಲೇಖಕನ ಅಭಿಪ್ರಾಯವೇ ಆ ಮಾಧ್ಯಮದ ಅಭಿಪ್ರಾಯ
ಎಂತಲೂ ವಾಚಕರು ಪರಿಗಣಿಸಬಾರದು. ಇದರ ಬಗ್ಗೆ ಚಿಂತನೆ ಬೇಕು, ಆದರೆ ಆ ಚಿಂತನೆಗೆ ಹಚ್ಚಿದ ಮಾಧ್ಯಮದ
ಮೇಲೆ ವೃಥಾ ದೋಷಾರೋಪಣೆ ಸ್ವತಃ ಲೇಖಕರಾದ ಆಕ್ಷೇಪ ತೆಗೆದ ಯಾರಿಗೂ ಶೋಭೆ ತರುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ